Site icon Vistara News

Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್‌ ಕಾರು ರೈಡ್‌ ಮಾಡಿದ ರಿಷಬ್‌ ಶೆಟ್ಟಿ ಹೇಳಿದ್ದೇನು?

Rishab Shetty

Rishab Shetty

ಬೆಂಗಳೂರು: ಸದ್ಯ ʼಕಲ್ಕಿ 2898 ಎಡಿʼ (Kalki 2898 AD) ಚಿತ್ರ ದೇಶದ ಗಮನ ಸೆಳೆದಿದೆ. ಈ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಚಿತ್ರ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದ್ದು, ಜೂನ್‌ 27ಕ್ಕೆ ತೆರೆಗೆ ಬರಲಿದೆ. ಟಾಲಿವುಡ್‌ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ (Nag Ashwin) ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮತ್ತಿತರರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಮಲ್‌ ಹಾಸನ್‌ ಮತ್ತು ಶೋಭನಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರು ಟ್ರೈಲರ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅದರ ಜತೆಗೆ ಚಿತ್ರದ ಪ್ರಮುಖ ಪಾತ್ರವಾಗಿರುವ ಬುಜ್ಜಿ (Bujji) ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಬುಜ್ಜಿ ಎಂದರೆ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ಪ್ರಭಾಸ್‌ ಅವರ ಕಾರು. ಚಿತ್ರಕ್ಕಾಗಿಯೇ ಇದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇದೀಗ ಬುಜ್ಜಿ ನಮ್ಮ ಕರುನಾಡಿಗೆ ಅದರಲ್ಲಿಯೂ ಕುಂದಾಪುರಕ್ಕೆ ಬಂದು ರಿಷಬ್‌ ಶೆಟ್ಟಿ (Rishab Shetty) ಅವರನ್ನು ಭೇಟಿಯಾಗಿದೆ.

ʼಕಾಂತಾರʼ ಚಿತ್ರದ ಮೂಲಕ ದೇಶದ ಗಮನ ಸೆಳೆದ ರಿಷಬ್‌ ಶೆಟ್ಟಿ ಅವರು ಸದ್ಯ ʼಕಾಂತಾರ ಚಾಪ್ಟರ್‌ 1ʼ ಸಿನಿಮಾದ ಶೂಟಿಂಗ್‌ಗಾಗಿ ತಮ್ಮ ಊರಾದ ಕುಂದಾಪುರದಲ್ಲಿ ಬೀಡುಬಿಟ್ಟಿದ್ದಾರೆ. ಅವರನ್ನು ಭೇಟಿಯಾಗಲು ʼಕಲ್ಕಿʼ ಬುಜ್ಜಿ ಕುಂದಾಪುರಕ್ಕೆ ಆಗಮಿಸಿದೆ. ರಿಷಬ್‌ ಶೆಟ್ಟಿ ಬುಜ್ಜಿಯನ್ನು ಓಡಿಸಿ ಥ್ರಿಲ್‌ ಆಗಿದ್ದಾರೆ.

ʼಕಲ್ಕಿ 2898 ಎಡಿʼ ಸಿನಿಮಾದ ಪ್ರಚಾರದ ಭಾಗವಾಗಿ ಬುಜ್ಜಿ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲೆಲ್ಲ ಸುತ್ತಿ ಇದೀಗ ಕರ್ನಾಟಕ್ಕೆ ಆಗಮಿಸಿದೆ. ಅದರಲ್ಲಿಯೂ ಡಿವೈನ್‌ ಸ್ಟಾರ್‌ ಅವರನ್ನು ಭೇಟಿಯಾಗಲು ಕುಂದಾಪುರಕ್ಕೆ ಬಂದಿಳಿದ ಬುಜ್ಜಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ರಿಷಬ್‌ ಶೆಟ್ಟಿ ಬುಜ್ಜಿಯನ್ನು ಓಡಿಸುತ್ತಿರುವ ವಿಡಿಯೊವನ್ನು ಚಿತ್ರ ತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್‌ ಆಗಿದೆ.

ಈಗಾಗಲೇ ಅಕ್ಕಿನೇನಿ ನಾಗಚೈತನ್ಯ, ಮಾಜಿ ಫಾರ್ಮುಲಾ ಒನ್ ರೇಸರ್ ನಾರಾಯಣ್ ಕಾರ್ತಿಕೇಯನ್, ಆನಂದ್ ಮಹೀಂದ್ರ ಸೇರಿದಂತೆ ಹಲವರ ಬುಜ್ಜಿಯಲ್ಲಿ ಒಂದು ರೌಂಡ್‌ ಹೊಡೆದಿದ್ದು, ಇದೀಗ ಈ ಅವಕಾಶ ರಿಷಬ್‌ ಶೆಟ್ಟಿ ಅವರಿಗೂ ಲಭಿಸಿದೆ. ಈ ಬಗ್ಗೆ ಅವರು ಸಂತಸ ಹಂಚಿಕೊಂಡಿದ್ದಾರೆ. “ಟೀಸರ್‌ನಲ್ಲೇ ಗೊತ್ತಾಗುತ್ತೆ. ಯಾವ ರೇಂಜ್‌ನಲ್ಲಿ ಬುಜ್ಜಿ ಹವಾ ಇದೆ ಅನ್ನೋದು. ಡ್ರೈವ್ ಮಾಡಿದ್ದು ಒಂದು ಅದ್ಭುತ ಅನುಭವ. ಆಲ್‌ ದಿ ಬೆಸ್ಟ್ ಭೈರವ ಮತ್ತು ಬುಜ್ಜಿ. ಕಲ್ಕಿ ಜೂನ್ 27ಕ್ಕೆ ರಿಲೀಸ್ ಆಗುತ್ತಿದೆ. ಎಲ್ಲರೂ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

ಹೊಸದೊಂದು ಲೋಕ ತೆರೆದಿಡಲಿದೆ ʼಕಲ್ಕಿʼ

ಸೈನ್ಸ್‌ ಫಿಕ್ಷನ್‌ ಚಿತ್ರ ʼಕಲ್ಕಿ 2898 ಎಡಿʼ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದು, ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ನೀವು ನಾಗ್‌ ಅಶ್ವಿನ್‌ ಕಟ್ಟಿಕೊಟ್ಟ ಬೇರೆಯದೇ ಪ್ರಪಂಚವನ್ನು ಕಣ್ತುಂಬಿಕೊಳ್ಳಬಹುದು. ಸುಮಾರು 6,000 ವರ್ಷಗಳ ಕಥೆ ತೆರೆ ಮೇಲೆ ಮೂಡಲಿದೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣದವಾದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಹಿಂದಿ, ಮಕಯಾಳಂನಲ್ಲಿ ತೆರೆಗೆ ಬರಲಿದೆ.

Exit mobile version