ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು (ಜನವರಿ 22) ರಾಮ ಮಂದಿರ (Ayodhya Ram Mandir) ಉದ್ಘಾಟನೆಯಾಗಲಿದೆ. ಈ ‘ಪ್ರಾಣ ಪ್ರತಿಷ್ಠಾ’ (Pran Pratistha-ಪ್ರತಿಷ್ಠಾಪನಾ ಸಮಾರಂಭ) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಪ್ರತಿಷ್ಠಾಪನಾ ಸಮಾರಂಭದ ನಂತರ ರಾಮ್ ಲಲ್ಲಾ (Lord Ram Lalla) ವಿಗ್ರಹವನ್ನು ರಾಮ ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಕನ್ನಡದ ನಟ ನಿಖಿಲ್ ಕುಮಾರ್, ರಿಷಬ್ ಅವರು ಅಯೋಧ್ಯೆಗೆ ತಲುಪಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಕೂಡ ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ತೆರಳಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಜತೆಗೆ ಇರುವ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಅಲ್ಲಿರುವ ಹಲವು ದೇವಾಲಯಕ್ಕೆ ರಿಷಬ್ ಭೇಟಿ ನೀಡಿದ್ದಾರೆ. ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ.. ಹನುಮನ ದರ್ಶನ’ ಎಂದು ಅವರು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಜತೆ ಅವರ ಪತ್ನಿಯೂ ಅಯೋಧ್ಯೆಗೆ ತೆರಳಿದ್ದಾರೆ.
ಇದು ನನ್ನ ಪೂರ್ವ ಜನ್ಮದ ಪುಣ್ಯ
ಈ ಹಿಂದೆ ರಿಷಬ್ ಅವರು ಆಹ್ವಾನ ಬಂದಿರುವ ಬಗ್ಗೆ ಹೇಳಿಕೊಂಡಿದ್ದರು. ʻಶ್ರೀರಾಮ ಜಯ ರಾಮ ಜಯ ಜಯ ರಾಮ… ಬಾಲ್ಯದಿಂದಲೂ ನಮ್ಮ ಮನೆಗಳಲ್ಲಿ ರಾಮನಾಮವ ಭಜಿಸುತ್ತಾ, ರಾಮ ಪ್ರೇಮವ ಭುಜಿಸುತ್ತಾ, ಆತನ ಆದರ್ಶಪ್ರಾಯ ಜೀವನದ ಕಥೆಗಳನ್ನು ಗುರು ಹಿರಿಯರಿಂದ ಕೇಳುತ್ತಾ ಬೆಳೆದವರು ನಾವು. ಇಂದು ಆ ಶ್ರೀರಾಮ ತಾನು ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಆ ಅಯೋಧ್ಯೆಗೆ ಬರುವಂತೆ ಕರೆ ಕಳಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ! ಶ್ರೀರಾಮನಿಗೆ ಜಯವಾಗಲಿ, ಅಯೋಧ್ಯೆಗೆ ಜಯವಾಗಲಿ- ರಿಷಬ್ಶೆಟ್ಟಿ ” ಎಂದು ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ಬರೆದುಕೊಂಡಿದ್ದರು.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ
ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ ಶೃಂಗಾರ ಅಥವಾ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ ಟ್ರಸ್ಟ್ ನೀಡಿರುವ ಪಾಸ್‌ಗಳ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.
ಪ್ರಾಣ ಪ್ರತಿಷ್ಠೆ ಎಷ್ಟು ಗಂಟೆಗೆ?
ಮಧ್ಯಾಹ್ನ 12.20ರಿಂದ 12.45ರ ಅವಧಿಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೆಲವರು ಮಾತ್ರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ. ಪ್ರಾಣಪ್ರತಿಷ್ಠಾಪನೆ ನೆರವೇರಿದ ಬಳಕ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತ್ತೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ಕ್ಕೆ ಸಂಧ್ಯಾರತಿಯೊಂದಿಗೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವು ಸಮಾರೋಪವಾಗಲಿದೆ.