ಬೆಂಗಳೂರು: ‘ಕಾಂತಾರ’ ಎಂಬ ಅದ್ಭುತ ಸಿನಿಮಾ ಮೂಲಕ ದೇಶ ಮಟ್ಟದಲ್ಲಿ ಮನೆಮಾತಾಗಿರುವ ರಿಷಬ್ ಶೆಟ್ಟಿ (Rishab Shetty) ಸೋಮವಾರ 2023ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ‘ಭರವಸೆಯ ನಟ’ ಎಂಬ ಪ್ರಶಸ್ತಿ ಸ್ವೀಕರಿಸಿದರು. ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಲುಂಗಿ ಧರಿಸಿಯೇ ಪಾಲ್ಗೊಂಡಿದ್ದು ವಿಶೇಷ. ಪ್ರಶಸ್ತಿ ಹಿಡಿದು, ರೆಡ್ ಕಾರ್ಪೆಟ್ನಲ್ಲಿ ಫೋಟೋಕ್ಕೆ ಪೋಸ್ ಕೊಟ್ಟ ಅವರು ಬಳಿಕ ಟ್ವೀಟ್ ಮಾಡಿ, ‘ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ, ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ರಿಷಬ್ ಶೆಟ್ಟಿ, ತಾವು ಈ ಪ್ರಶಸ್ತಿಯನ್ನು ನಟ ಪುನೀತ್ ರಾಜಕುಮಾರ್ ಮತ್ತು ನಿರ್ದೇಶಕ ಎಸ್.ಕೆ.ಭಗವಾನ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಖುಷಿಯನ್ನು ನನಗೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನಾನು ಹೊಂಬಾಳೆ ಫಿಲ್ಮ್ಸ್ ಮತ್ತು ವಿಜಯ್ ಕಿರಗುಂದೂರು ಅವರಿಗೆ ಸದಾ ಕೃತಜ್ಞನಾಗಿ ಇರುತ್ತೇನೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರಿಂದಲೇ ನಾನು ಕಾಂತಾರದಂಥ ಅದ್ಭುತ ಸಿನಿಮಾ ಕೊಡಲು ಸಾಧ್ಯವಾಯಿತು. ಅವರೊಂದಿಗೆ ಸೇರಿ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಲು ಉತ್ಸುಕನಾಗಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳಿದರು. ಹಾಗೇ, ಇಡೀ ಕಾಂತಾರ ತಂಡ ಮತ್ತು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಧನ್ಯವಾದ ಸಲ್ಲಿಸಿದರು.