Site icon Vistara News

Rishab Shetty: ವಿಶೇಷ ಜ್ಯೂರಿ ಅವಾರ್ಡ್ ತಮ್ಮ ನೆಚ್ಚಿನ ನಟನಿಗೆ ಅರ್ಪಿಸಿದ ರಿಷಬ್‌ ಶೆಟ್ಟಿ, ಯಾರವರು?

rishab letter

rishab letter

ಬೆಂಗಳೂರು: ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರ ‘ಕಾಂತಾರ’ (Kantara). ರಿಷಬ್‌ ಶೆಟ್ಟಿ (Rishab Shetty) ಈ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿದ್ದರು. ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ ಬರೋಬ್ಬರಿ 400 ಕೋಟಿ ರೂ. ಗಳಿಸಿತ್ತು. ಈ ಎಲ್ಲ ಹೆಗ್ಗಳಿಕೆ ನಡುವೆ ‘ಕಾಂತಾರ’ ಮುಡಿಗೆ ಇನ್ನೊಂದು ಗರಿ ಸಿಕ್ಕಿದೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ʼಕಾಂತಾರʼ ಸಿನಿಮಾ ಚೊಚ್ಚಲ ಆವೃತ್ತಿಯ ʼಸಿಲ್ವರ್ ಪಿಕಾಕ್​ ಅವಾರ್ಡ್’​​ ತನ್ನದಾಗಿಸಿಕೊಂಡಿದೆ. ರಿಷಬ್‌ ಶೆಟ್ಟಿ ಅವರಿಗೆ ವಿಶೇಷ ಜ್ಯೂರಿ ಅವಾರ್ಡ್ (Special Jury Award) ಲಭಿಸಿದ್ದು, ಅದನ್ನು ಅವರು ಹಿರಿಯ ನಟ ಶಂಕರ್‌ ನಾಗ್‌ (Shankar Nag) ಅವರಿಗೆ ಅರ್ಪಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ರಿಷಬ್‌ ಶೆಟ್ಟಿ ಈ ಪ್ರಶಸ್ತಿಯನ್ನು ಶಂಕರ್‌ ನಾಗ್‌ ಅವರಿಗೆ ಅರ್ಪಿಸಿದ್ದಾರೆ. ʼ54ನೇ ಗೋವಾ ಇಂಟರ್‌ ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾ ಸ್ಪೆಷಲ್‌ ಜ್ಯೂರಿ ಅವಾರ್ಡ್‌ ಹೊರಕಿದ್ದು ಎಂದೂ ಮರೆಯಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ ಎಂದು ರಿಷಬ್‌ ಪತ್ರ ಆರಂಭಿಸಿದ್ದಾರೆ.

1979ರಲ್ಲಿ ನನ್ನ ಸ್ಫೂರ್ತಿಯಾದ ಶಂಕರ್‌ ನಾಗ್‌ ಸರ್‌ ಅವರಿಗೆ ʼಒಂದಾನೊಂದು ಕಾಲದಲ್ಲಿʼ ಚಿತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿದ್ದು, ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್‌ ದೊರೆತಿದ್ದು ಅತ್ಯಂತ ಸಂತಸ ನೀಡಿದೆ ಎಂದು ರಿಷಬ್‌ ಬರೆದಿದ್ದಾರೆ.

ಮುಂದುವರಿದು, ʼಕಾಂತಾರʼವನ್ನು ನೋಡಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು, ಇದೀಗ ʼಕಾಂತಾರ ಅಧ್ಯಾಯ 1ʼಕ್ಕೂ ನೀಡುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಮತ್ತೊಮ್ಮೆ ಉತ್ತಮ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣವಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಅಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್‌ ನಾಗ್‌ ಅವರಿಗೆ ಅರ್ಪಿಸುತ್ತೇನೆʼ ಎಂದು ರಿಷಬ್‌ ಶೆಟ್ಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kantara Movie: ಯೂಟ್ಯೂಬ್​ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?

ಪ್ರಿಕ್ವೆಲ್‌ಗೆ ಮುಹೂರ್ತ

ಸದ್ಯ ರಿಷಬ್‌ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಕೈಗೆತ್ತಿಕೊಂಡಿದ್ದಾರೆ. ಇದು ಕಾಂತಾರ ಚಿತ್ರದ ಪ್ರಿಕ್ವೆಲ್‌. ಅಂದರೆ ʼಕಾಂತಾರʼದ ಕಥೆ ನಡೆಯುವುದಕ್ಕೂ ಮೊದಲು ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಅಧ್ಯಾಯ 1ರಲ್ಲಿ ಹೇಳಲಿದ್ದಾರೆ. ನವೆಂಬರ್‌ 27ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ. ಜತೆಗೆ ಅಂದೇ ಫಸ್ಟ್ ಲುಕ್ ಟೀಸರ್ ರಿಲೀಸ್‌ ಆಗಿ ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆ ಕಂಡಿದೆ. ಏಳು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಟೀಸರ್ 24 ಗಂಟೆಗಳಲ್ಲಿ ಬರೋಬ್ಬರಿ 12 ಮಿಲಿಯನ್ (1.2 ಕೋಟಿ) ಬಾರಿ ವೀಕ್ಷಣೆ ಕಂಡು ಹಲವು ದಾಖಲೆಗಳನ್ನು ಸರಿಗಟ್ಟಿದೆ. ರಿಷಬ್ ಶೆಟ್ಟಿ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿರುವ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಅಲ್ಲದೆ ವಿಶ್ವದ ಅತಿ ದೊಡ್ಡ ಸರ್ಚ್ ಎಂಜಿನ್​ ಗೂಗಲ್​ ಕೂಡ ‘ಕಾಂತಾರ ಚಾಪ್ಟರ್ 1’ರ ಫಸ್ಟ್​ ಲುಕ್ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ʼವಾಹ್​ʼ ಎಂದು ಉದ್ಗಾರ ತೆಗೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version