Site icon Vistara News

Rishab Shetty : ಹೊಸ ಹೆಜ್ಜೆ, ಹೊಸ ಕನಸು, ಹೊಸ ಪ್ರಯತ್ನಕ್ಕೆ ಮುಂದಾದ ರಿಷಬ್‌ ಶೆಟ್ಟಿ; ಏನದು?

Rishab Shetty Starts Kerady Studios to promote Cinema

ಬೆಂಗಳೂರು: ಕಾಂತಾರ ಸಿನಿಮಾ ಖ್ಯಾತಿಯ ನಟ, ನಿರ್ದೇಶಕ ರಿಷಬ್‌ ಶೆಟ್ಟಿ  (Rishab Shetty) ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಿನಿಮಾಗಳ ಪ್ರಚಾರ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸೇವೆಗಳನ್ನು ನೀಡಲು ಹೊಸ ವೇದಿಕೆ ಕಟ್ಟಿದ್ದಾರೆ. ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬ ಆಶಯದೊಂದಿಗೆ ರಿಷಬ್‌ ಸೋಷಿಯಲ್‌ ಮೀಡಿಯಾ ಮೂಲಕ ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ರಿಷಬ್‌ ಈ ಬಗ್ಗೆ ಪೋಸ್ಟ್‌ ಮಾಡಿ ʻʻಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, ‘ಕೆರಾಡಿ ಸ್ಟುಡಿಯೋಸ್ (Kerady Studios) ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯʼʼ ಎಂದು ವಿವರಿಸಿದ್ದಾರೆ.

ʼʼಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ” ಎಂದು ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Rishab Shetty: ಆರ್​ಸಿಬಿಗೆ ʻಜೈʼ ಎಂದ ರಿಷಬ್ ಶೆಟ್ಟಿ ಪುತ್ರಿ ರಾಧ್ಯಾ: ಮುದ್ದು ಕಂದಮ್ಮನ ವಿಡಿಯೊ ವೈರಲ್‌

ರಿಷಬ್‌ ಶೆಟ್ಟಿ ಪೋಸ್ಟ್‌

ರಿಷಬ್ ಶೆಟ್ಟಿ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆರಂಭದಲ್ಲಿ ಪೋಷಕ ಪಾತ್ರ ಮಾಡುತ್ತಿದ್ದ ಅವರು ನಂತರ ಹೀರೊ ಆದರು. ‘ರಿಕ್ಕಿ’ ಚಿತ್ರದಿಂದ ನಿರ್ದೇಶಕರಾದರು. ‘ಕಿರಿಕ್ ಪಾರ್ಟಿ’ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. 2018ರಲ್ಲಿ ರಿಲೀಸ್ ಆದ ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರದ ಮೂಲಕ ನಿರ್ಮಾಪಕನಾಗಿ ದೊಡ್ಡ ಯಶಸ್ಸು ಕಂಡರು. ಇತ್ತೀಚೆಗೆ ರಿಲೀಸ್ ಆದ ‘ಕಾಂತಾರ’ ಸಿನಿಮಾ ರಿಷಬ್ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದೆ.

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

Exit mobile version