ಬೆಂಗಳೂರು: ಕಳೆದ ಜುಲೈ ೧ರಂದು ಬಿಡುಗಡೆಗೊಂಡಿದ್ದ ಆರ್ ಮಾಧವನ್ ನಿರ್ದೇಶಿಸಿ ನಟಿಸಿರುವ ‘ರಾಕೆಟ್ರಿ’ (Rocketry: The Nambi Effect) ಸಿನಿಮಾ ಅವರನ್ನು ಸಾಲದ ಸುಲಿಗೆ ಸಿಲುಕಿತ್ತಾ? ಅವರು ತಮ್ಮೆಲ್ಲಾ ಹಣ ಕಳೆದುಕೊಂಡು, ಮನೆಯನ್ನೂ ಕಳೆದುಕೊಂಡರಾ? ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದ್ದು, ಈ ಬಗ್ಗೆ ಸ್ವತಃ ಮಾಧವನ್ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.
‘ರಾಕೆಟ್ರಿ’ಯು ಭಾರತದ ಹೆಮ್ಮೆಯ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಸಿನಿಮಾ ಬಿಡುಗಡೆ ದಿನದಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಮಾಧವನ್ ಈ ಸಿನಿಮಾದ ಸೋಲಿನಿಂದ ತಮ್ಮೆಲ್ಲ ಹಣವನ್ನು ಕಳೆದುಕೊಂಡಿದ್ದಲ್ಲದೆ, ಮನೆಯನ್ನೂ ಕಳೆದುಕೊಂಡಿದ್ದಾರೆ ಎಂಬ ಚರ್ಚೆಗಳು ಟ್ವಿಟರ್‌ನಲ್ಲಿ ಹುಟ್ಟಿಕೊಂಡಿದ್ದವು. ಈ ಸುದ್ದಿ ಬಹುಬೇಗ ಎಲ್ಲೆಡೆ ಹರಡಿದೆ.
ʻʻರಾಕೆಟ್ರಿ: ದಿ ನಂಬಿ ಎಫೆಕ್ಟ್” ಚಿತ್ರದ ಮೂಲ ನಿರ್ದೇಶಕರು ಆಯ್ಕೆಯಿಂದ ಹೊರಗುಳಿದ ಕಾರಣಕ್ಕೆ ಮಾಧವನ್ ಅವರೇ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಆದರೆ, ಸಿನಿಮಾ ಸೋತು ಅವರು ನಷ್ಟಕ್ಕೆ ಸಿಲುಕಿದ್ದಾರೆʼʼಎಂಬಿತ್ಯಾದಿ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಮಾಧವನ್ ಹಾಗೇನೂ ಆಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ | Swimming | ನಟ ಮಾಧವನ್ ಹೆಮ್ಮೆಪಡುವಂತೆ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪುತ್ರ ವೇದಾಂತ್
“ನಾನು ನನ್ನ ಮನೆ ಅಥವಾ ಏನನ್ನೂ ಕಳೆದುಕೊಂಡಿಲ್ಲ. ವಾಸ್ತವವಾಗಿ ರಾಕೆಟ್ರಿ ಸಿನಿಮಾದಿಂದಾಗಿ ಲಾಭ ಗಳಿಸಿದ್ದೇನೆ. ಇದರಿಂದ ಬಂದ ಲಾಭದಿಂದಾಗಿ ನಾನು ಆದಾಯ ತೆರಿಗೆಯನ್ನೂ ಪಾವತಿ ಮಾಡಿದ್ದೇನೆ. ದೇವರ ಅನುಗ್ರಹದಿಂದ ನಾವೆಲ್ಲರೂ ಬಹಳ ಚೆನ್ನಾಗಿದ್ದೇವೆ. ನಾನು ನನ್ನ ಮನೆಯಲ್ಲಿಯೇ ವಾಸಿಸುತ್ತಿದ್ದೇನೆʼʼಎಂದು ರಿಟ್ವೀಟ್ ಮಾಡಿದ್ದಾರೆ.
ರಾಕೆಟ್ರಿಯಲ್ಲಿ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರ್.ಮಾಧವನ್ ತಮ್ಮ ಅಭಿನಯದ ಜತೆ ಜತೆಗೆ ನಿರ್ದೇಶನ ಕೌಶಲ್ಯಕ್ಕಾಗಿಯೂ ಪ್ರಶಂಸೆ ಗಳಿಸಿದ್ದರು. ಜುಲೈ ೧ರಂದು ಬಿಡುಗಡೆಗೊಂಡಿದ್ದ ಈ ಸಿನಿಮಾ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಪ್ರಪಂಚದಾದ್ಯಂತ ಆರು ಭಾಷೆಗಳಲ್ಲಿ ತೆರೆಕಂಡಿತ್ತು. ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಸುಳ್ಳು ಆಪಾದನೆ ಎದುರಿಸಿ 1994ರಿಂದ 1998ರವರೆಗೆ ಅನುಭವಸಿದ ಹಿಂಸೆ, ಕೇರಳ ಪೊಲೀಸರು ನೀಡಿದ ಕಿರುಕುಳ ಮತ್ತು ಕೊನೆಗೂ ಅವರು ದೋಷಮುಕ್ತಿಯಾದ ಕಥಾವಸ್ತು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.
ರಾಕೆಟ್ರಿಯು ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ ಹೀಗೆ ಅಂತಾರಾಷ್ಟ್ರೀಯ ಮಟ್ಟದ ನಟರನ್ನು ಒಳಗೊಂಡಿದೆ. ಅಲ್ಲದೆ, ರಾನ್ ಡೊನಾಚಿ, ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸೂರ್ಯ ಸಹ ವಿಶೇಷ ಪಾತ್ರಗಳಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ | Rocketry: The Nambi Effect | ಮಾಧವನ್ ನಿರ್ದೇಶಿಸಿ, ನಟಿಸಿರುವ ರಾಕೆಟ್ರಿ ಸಿನಿಮಾ ವೀಕ್ಷಿಸಿದ ಸಂಸದರು