Site icon Vistara News

Roopesh Shetty | ಬಿಗ್‌ ಬಾಸ್‌ ಖ್ಯಾತಿಯ ರೂಪೇಶ್ ಶೆಟ್ಟಿ ಸಿನಿಮಾ ಟ್ರೈಲರ್‌ ರಿಲೀಸ್‌!

Roopesh Shetty

ಬೆಂಗಳೂರು: ಗಗನ್. ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಜನವರಿ 13ಕ್ಕೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty), ಹಾಗೂ ʻಬ್ರಹ್ಮಗಂಟುʼ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ನಿರ್ದೇಶಕ ಗಗನ್. ಎಂ ಮಾತನಾಡಿ ʻʻಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಮಂಕು ಭಾಯ್ ಫಾಕ್ಸಿ ರಾಣಿ ನನ್ನ ನಿರ್ದೇಶನದ ಮೊದಲ ಸಿನಿಮಾ. ಮೊದಲು ಇದನ್ನು ಶಾರ್ಟ್ ಮೂವಿ ಮಾಡೋಣ ಎಂದು ಪ್ಲ್ಯಾನ್ ಮಾಡಿಕೊಂಡಿದ್ದೆ. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಸಿದ್ಧಮಾಡಿಕೊಂಡೆವು. 2019ರಲ್ಲಿ ಆರಂಭವಾದ ಸಿನಿಮಾವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ಜನವರಿ 13ಕ್ಕೆ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ | Roopesh Shetty | ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಸಿನಿಮಾ ಮಂಕು ಭಾಯ್ ಫಾಕ್ಸಿ ರಾಣಿ ಬಿಡುಗಡೆಗೆ ಸಜ್ಜು

ನಾಯಕಿ ಪಂಚಮಿ ರಾವ್ ಮಾತನಾಡಿ ʻʻಇದು ನನ್ನ ಮೊದಲ ಸಿನಿಮಾ. ನಾನು ಕ್ಲಾಸಿಕಲ್ ಡಾನ್ಸರ್ ಕೂಡ ಹೌದು. ಸಿನಿಮಾ ರಂಗದ ಮೇಲೆ ಮೊದಲಿನಿಂದ ಆಸಕ್ತಿ ಇತ್ತು. ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ನಿರ್ದೇಶಕರು ಕಥೆ ಹೇಳಿದಾಗ ಕಥೆ ತುಂಬಾ ವಿಭಿನ್ನ ಎನಿಸಿತು ಆದ್ದರಿಂದ ಒಪ್ಪಿಕೊಂಡೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದರು.

ಗೀತಾ ಭಾರತಿ ಭಟ್ ಮಾತನಾಡಿ ʻʻನನಗೆ ಈ ಪ್ರಾಜೆಕ್ಟ್ ವೈಯಕ್ತಿಕವಾಗಿ ತುಂಬ ಸ್ಪೆಷಲ್. ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದೇನೆ. ಆದರೆ ಲೀಡ್ ರೋಲ್‌ನಲ್ಲಿ ಮಾಡಿರೋದು ಇದೇ ಮೊದಲು. ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಆರಂಭದಲ್ಲಿ ಮಂಗಳೂರು ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ ಶೂಟಿಂಗ್ ಮುಗಿಯುವ ಹೊತ್ತಿಗೆ ಪೂರ್ತಿ ಮಂಗಳೂರು ಕನ್ನಡ ಕಲಿತಿದ್ದೆ. ಸಿನಿಮಾ ಎರಡೂವರೆ ವರ್ಷದ ನಂತರ ತೆರೆ ಮೇಲೆ ಬರುತ್ತಿದೆ. ನನ್ನನ್ನು ನಾನು ತೆರೆ ಮೇಲೆ ನೋಡಿಕೊಂಡಾಗ ಇನ್ನಷ್ಟು ಮುಂದೆ ಹೋಗಲು ಆತ್ಮ ವಿಶ್ವಾಸ ಬಂದಿದೆʼʼಎಂದರು.

ನಾಯಕ ನಟ ರೂಪೇಶ್ ಶೆಟ್ಟಿ ಮಾತನಾಡಿ ʻʻಈ ಸಿನಿಮಾ ಶೂಟ್ ಆಗಿ ಮೂರು ವರ್ಷ ಆಯ್ತು. ಚಿತ್ರದಲ್ಲಿ ಕಂಟೆಂಟ್ ಹೀರೊ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಕಥೆ ಚಿತ್ರದಲ್ಲಿದೆ. ಸ್ನೇಹಿತರೇ ಆತನಿಗೆ ಪ್ರಪಂಚ. ಇದರೊಂದಿಗೆ ಒಂದು ಮುಗ್ಧ ಲವ್ ಸ್ಟೋರಿ ಇರುವ ಸಿನಿಮಾ. ನಿರ್ದೇಶಕ ಗಗನ್ ಒಂದು ಕನ್ನಡ ಸಿನಿಮಾ ಮಾಡೋಣ ಎಂದಾಗ ಒಪ್ಪಿಕೊಂಡೆ. ಚಿತ್ರಕ್ಕಾಗಿ ಎಂಟು ಕೆಜಿ ದಪ್ಪ ಆಗಿದ್ದೆ. ಕನ್ನಡದಲ್ಲಿ ಲೀಡ್ ಆಗಿ ನಟಿಸುತ್ತಿರುವ ಐದನೇ ಸಿನಿಮಾವಿದು. ‘ಡೇಂಜರ್ ಝೋನ್’, ‘ಅನುಷ್ಕಾ’, ‘ನಿಶಬ್ದ 2’, ‘ಗೋವಿಂದ ಗೋವಿಂದ’ ಸಿನಿಮಾ ಮಾಡಿದ್ದೇನೆ. ಆಗೆಲ್ಲ ಆ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಆದ್ರೆ ಫಸ್ಟ್ ಟೈಂ ರೂಪೇಶ್ ಶೆಟ್ಟಿ ಸಿನಿಮಾ ಬರುತ್ತಿದೆ ಎಂದು ಎಲ್ಲರುರೂ ಹೇಳುತ್ತಿದ್ದಾರೆ ಇದು ತುಂಬಾ ಖುಷಿ ಕೊಡುತ್ತಿದೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ. ಜನವರಿ 13ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿʼʼ ಎಂದರು.

ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರ ಜನವರಿ 13ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

ಇದನ್ನೂ ಓದಿ | Roopesh Shetty | ಬಿಗ್‌ ಬಾಸ್‌ ಖ್ಯಾತಿಯ ರೂಪೇಶ್‌ ಶೆಟ್ಟಿ ಸಿನಿಮಾ ಫ್ಯಾಥೋ ಸಾಂಗ್‌ ಔಟ್‌: ಜನವರಿಯಲ್ಲಿ ಚಿತ್ರ ಬಿಡುಗಡೆ!

Exit mobile version