Site icon Vistara News

RRR Golden Globe Award | ʼಆರ್‌ಆರ್‌ಆರ್‌ʼಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ತಂದುಕೊಟ್ಟ ಎಂ ಎಂ ಕೀರವಾಣಿ ಹಿನ್ನೆಲೆ ಗೊತ್ತಾ?

ಹೈದರಾಬಾದ್:‌ ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾದ ʼನಾಟು ನಾಟುʼ ಹಾಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಸಾಮಾಜಿಕ ಜಾಲತಾಣದಲ್ಲೂ ಇದೇ ಹಾಡು, ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆಯಲ್ಲೂ ಇದೇ ಹಾಡು. ಕೊನೆಗೆ ಮದುವೆ ಮನೆಗಳಲ್ಲಿ ವಧು-ವರರ ಎದುರು ಕುಣಿಯುವವರ ಆಯ್ಕೆಯೂ ಇದೇ ಹಾಡು. ಭಾರತದಾದ್ಯಂತ ಟ್ರೆಂಡ್‌ ಆಗಿದ್ದ ಈ ಹಾಡು ಇದಿಗ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು (RRR Golden Globe Award) ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಮೂಲಗೀತೆ ಎನ್ನುವ ವಿಭಾಗದಲ್ಲಿ ಈ ಹಾಡಿಗೆ ಪ್ರಶಸ್ತಿ ಲಭಿಸಿದೆ. ಹಾಡಿನ ಮಾಂತ್ರಿಕ, ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ(61) ಕೈಗೆ ಪ್ರಶಸ್ತಿ ತಲುಪಿದೆ. ಹಾಗಾದರೆ ಯಾರು ಈ ಕೀರವಾಣಿ, ಅವರ ಹಿನ್ನೆಲೆಯೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: RRR Film | ಏಷ್ಯನ್ ಫಿಲ್ಮ್ ಅವಾರ್ಡ್ಸ್‌ ರೇಸಿನಲ್ಲಿ ಪೊನ್ನಿಯನ್ ಸೆಲ್ವನ್, ಆರ್‌ಆರ್‌ಆರ್‌!

ಕೀರವಾಣಿ ಅವರ ಪೂರ್ತಿ ಹೆಸರು ಕೊಡುರಿ ಮರಾಕಥಮಣಿ ಕೀರವಾಣಿ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರಿನಲ್ಲಿ ಜನಿಸಿದವರು. ಇವರ ತಾಯಿ ಭಾನುಮತಿ ಅವರು ನಿರ್ದೇಶಕ ರಾಜಮೌಳಿ ಅವರ ಚಿಕ್ಕಮ್ಮ. ಕೀರವಾಣಿ ಅವರು 1980ರಲ್ಲಿಯೇ ಸಂಗೀತ ನಿರ್ದೇಶನ ಆರಂಭಿಸಿದವರು. ಇವರ ವೃತ್ತಿ ಬದುಕಿನಲ್ಲಿ ಒಳ್ಳೆಯ ತಿರುವು ತಂದುಕೊಟ್ಟದ್ದು 1990ರ ʼಮನಸು ಮಮಥಾʼ ಸಿನಿಮಾ. ರಾಮ್‌ಗೋಪಾಲ್‌ ವರ್ಮಾ ಅವರ ʼಕ್ಷಣ ಕ್ಷಣಂʼ ಮತ್ತು ʼಅನ್ನಮಯ್ಯʼ ಸಿನಿಮಾಗಳಲ್ಲೂ ಇವರ ಸಂಗೀತ ಕಮಾಲ್‌ ಮಾಡಿತ್ತು. ಅನ್ನಮಯ್ಯ ಸಿನಿಮಾದ ಸಂಗೀತಕ್ಕಾಗಿ ಕೀರವಾಣಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತು. ಅಂದ ಹಾಗೆ ಕೀರವಾಣಿ ಅವರು ಸಂಗೀತ ನಿರ್ದೇಶನದ ಜತೆಯಲ್ಲಿ ಗಾಯಕರಾಗಿಯೂ ಕೆಲಸ ಮಾಡಿರುವುದು ವಿಶೇಷ.

ಇದನ್ನೂ ಓದಿ: RRR Film | ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಿಂದ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
2015ರಲ್ಲಿ ಕೀರವಾಣಿ ಅವರು ತಮ್ಮ ಸೋದರ ಸಂಬಂಧಿ ರಾಜಮೌಳಿ ಅವರೊಂದಿಗೆ ಒಪ್ಪಂದ ಮಾಡಿಕೊಂಡರು. ನಂತರ ಅವರ ʼಬಾಹುಬಲಿ: ದಿ ಬಿಗಿನಿಂಗ್‌ʼ ಮತ್ತು ʼಬಾಹುಬಲಿ 2′ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದರು. ಅದರ ಬೆನ್ನಲ್ಲಿ ಆರ್‌ಆರ್‌ಆರ್‌ ಸಿನಿಮಾಕ್ಕೂ ಸಂಗೀತ ಸಂಯೋಜಿಸಿ ಕೊಟ್ಟರು. ಕೀರವಾಣಿ ಅವರು ಸಂಯೋಜಿಸಿದ್ದ ನಾಟು ನಾಟು ಹಾಡಿಗೆ ಕಾಲಭೈರವ್‌ ಮತ್ತು ರಾಹುಲ್‌ ಸಿಪ್ಲಿಗುಂಜ್‌ ಅವರು ಧ್ವನಿ ನೀಡಿದ್ದಾರೆ.


ಜಮೀನ್ದಾರ್ರು ಸಿನಿಮಾದ ಸರದಾರ:

ಎಂ.ಎಂ.ಕೀರವಾಣಿ ಅವರು ತೆಲುಗು ಮಾತ್ರವಲ್ಲದೆ ಹಲವಾರು ಭಾಷೆಗಳ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಂ ಮತ್ತು ಹಿಂದಿ ಸಿನಿಮಾಗಳಲ್ಲೂ ಇವರ ಛಾಪನ್ನು ಕಾಣಬಹುದು. ಕನ್ನಡದ ಪ್ರಸಿದ್ಧ ʼಜಮೀನ್ದಾರ್ರುʼ, ʼವೀರ ಮದಕರಿʼ, ʼದೀಪಾವಳಿʼ ಸೇರಿ ಅನೇಕ ಸಿನಿಮಾಗಳಿಗೆ ಕೀರವಾಣಿ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಿಂದಿಯ ಈಸ್ ರಾತ್ ಕಿ ಸುಬಾಹ್ ನಹಿನ್ (1996), ಸುರ್ – ದಿ ಮೆಲೊಡಿ ಆಫ್ ಲೈಫ್, ಝಖ್ಮ್, ಸಾಯಾ, ಜಿಸ್ಮ್, ಕ್ರಿಮಿನಲ್, ರೋಗ್ ಮತ್ತು ಪಹೇಲಿ ಸಿನಿಮಾಗಳಲ್ಲಿ ಕೀರವಾಣಿ ಸಂಗೀತವಿದೆ. ಒಟ್ಟಾರೆಯಾಗಿ 220ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿಕೊಟ್ಟಿರುವ ಹೆಮ್ಮೆ ಕೀರವಾಣಿ ಅವರದ್ದು.


ಕುಟುಂಬದ ತುಂಬೆಲ್ಲ ಕಲಾವಿದರು

ವಿಶೇಷವೆಂದರೆ ಕೀರವಾಣಿ ಅವರ ಕುಟುಂಬವೇ ಕಲಾವಿದರ ಕುಟುಂಬ ಎನ್ನಬಹುದು. ಅವರ ಸಹೋದರ ಕಲ್ಯಾಣಿ ಮಲಿಕ್‌ ಕೂಡ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರು. ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕಿ ಹಾಗೂ ಗಾಯಕಿ ಎಂ.ಎಂ.ಶ್ರೀಲೇಖಾ ಅವರ ಸೋದರ ಸಂಬಂಧಿಗಳು. ಬಾಲಿವುಡ್‌ನ ಚಲನಚಿತ್ರ ಚಿತ್ರಕಥೆಗಾರ ಹಾಗೂ ನಿರ್ದೇಶಕ ಕೆ.ವಿ.ವಿಜಯೇಂದ್ರ ಪ್ರಸಾದ್‌ ಅವರು ಕೀರವಾಣಿ ಅವರ ಸೋದರಳಿಯ. ಕೀರವಾಣಿ ಅವರ ಪತ್ನಿ ಶ್ರೀವಲ್ಲಿ ತೆಲುಗು ಸಿನಿಮಾಗಳ ಲೈನ್‌ ಪ್ರೊಡ್ಯುಸರ್‌. ಇನ್ನು ಅವರ ಮಗ ಕಾಲಭೈರವ್‌ ಗಾಯಕ. ಅವರೇ ನಾಟು ನಾಟು ಹಾಗೂ ಬಾಹುಬಲಿ 2 ಸಿನಿಮಾದ ʼದಂಡಾಲಯ್ಯʼ ಹಾಡಿಗೆ ಧ್ವನಿಯಾದವರು!

Exit mobile version