ವಾಷಿಂಗ್ಟನ್: ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದವರಿಗೆ ಬಹುನಿರೀಕ್ಷಿತ ಕಾರ್ಯಕ್ರಮ ಎನ್ನಬಹುದು. ದಕ್ಷಿಣ ಭಾರತದ ಹೆಮ್ಮೆಯಾದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ರೇಸ್‌ನ (RRR in Oscar 2023) ಕೊನೆಯ ಹಂತದಲ್ಲಿದೆ. ಈ ಪ್ರಶಸ್ತಿ ಆರ್‌ಆರ್‌ಆರ್ ಮುಡಿಗೆ ಏರುತ್ತದೆಯೇ ಎನ್ನುವುದನ್ನು ನೋಡಲು ಭಾರತೀಯರು ಕಾದು ಕುಳಿತಿದ್ದಾರೆ.
ಇದನ್ನೂ ಓದಿ: Viral News : ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್ ವಿಡಿಯೊ
ಏಕೈಕ ಗೀತೆ
ಈವರೆಗೆ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಭಾರತದ ಯಾವೊಂದು ಗೀತೆಯೂ ನಾಮ ನಿರ್ದೇಶನವಾಗಿರಲಿಲ್ಲ. ಇದೇ ಮೊದಲನೇ ಬಾರಿಗೆ ನಮ್ಮ ದೇಶದ ಹಾಡೊಂದು ಆ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇದು ನಮ್ಮ ದಕ್ಷಿಣ ಭಾರತದ ನಾಟು ನಾಟು ಹಾಡು ಎನ್ನುವ ಹೆಮ್ಮೆ ದಕ್ಷಿಣ ಭಾರತೀಯರದ್ದು. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಭೈರವ ಅವರು ಹಾಡಿಗೆ ಧ್ವನಿ ನೀಡಿದ್ದಾರೆ.
ಈ ಹಾಡು ಅಪ್ಲಾಸ್(ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ ಗನ್: ಮೇವರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್), ದಿಸ್ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒಮ್ಸ್) ಹಾಡುಗಳೊಂದಿಗೆ ಸ್ಪರ್ಧಿಸುತ್ತಿದೆ.
ಲಾಸ್ ಏಂಜಲೀಸ್‌ನಲ್ಲಿ ನಮ್ಮ ಹೀರೋಗಳು
ಆಸ್ಕರ್ ಕಾರ್ಯಕ್ರಮಕ್ಕಾಗಿ ಆರ್‌ಆರ್‌ಆರ್ ಚಿತ್ರತಂಡ ಲಾಸ್ ಏಂಜಲೀಸ್‌ಗೆ ತೆರಳಿದೆ. ಮಾಲೆ ಧರಿಸಿರುವ ರಾಮ್ ಚರಣ್ ಅವರು ಲಾಸ್ ಏಂಜಲೀಸ್‌ಗೆ ಹೊರಡುವಾಗ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದರು. ರಾಮ್‌ಚರಣ್ ಹೋಗಿ ಕೆಲ ದಿನಗಳ ನಂತರ ಜೂನಿಯರ್ ಎನ್‌ಟಿಆರ್ ಅವರು ಲಾಸ್ ಏಂಜಲೀಸ್‌ಗೆ ತೆರಳಿದ್ದಾರೆ. ಅಲ್ಲಿ ಚಿತ್ರತಂಡ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
ಅತ್ಯುತ್ತಮ ಚಿತ್ರವಾಗಲಿಲ್ಲ
ಆರ್‌ಆರ್‌ಆರ್ ಸಿನಿಮಾವನ್ನು ಭಾರತದಿಂದ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆ ಮಾಡಲಾಗಿರಲಿಲ್ಲ. ಆದರೆ ಚಿತ್ರತಂಡವೇ ಆಸ್ಕರ್‌ನ 14 ವಿಭಾಗಗಳಲ್ಲಿ ಖಾಸಗಿಯಾಗಿ ನೋಂದಣಿ ಮಾಡಿಕೊಂಡಿತ್ತು. ಅದರಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಮಾತ್ರ ನಾಮ ನಿರ್ದೇಶನಗೊಂಡಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಅವರು ಹಾಲಿವುಡ್‌ನ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲೂ ಮಾತನಾಡಿದ್ದರು. “ಆರ್‌ಆರ್‌ಆರ್ ಸಿನಿಮಾವನ್ನು ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡದಿರುವುದು ನಿಜಕ್ಕೂ ನಿರಾಶಾದಾಯಕವಾಗಿದೆ. ಆದರೆ ನಾವು ಅದು ಏಕೆ ಆಗಲಿಲ್ಲ ಎಂದು ಚಿಂತಿಸುತ್ತ ಕುಳಿತುಕೊಳ್ಳುವ ಜನರಲ್ಲ. ನಮ್ಮ ಪ್ರಯತ್ನವನ್ನು ನಾವು ಮುಂದುವರಿಸಬೇಕು ಎನ್ನುವವರು. ಮರಾಠಿಯ ʼಚೆಲೋ ಶೋʼ ಸಿನಿಮಾ ಅಧಿಕೃತ ಆಯ್ಕೆಯಾಗಿದೆ. ಅದೂ ಕೂಡ ಭಾರತೀಯ ಸಿನಿಮಾ ಎನ್ನುವ ಖುಷಿ ನನಗಿದೆ” ಎಂದು ಹೇಳಿದ್ದರು.
ಆರ್‌ಆರ್‌ಆರ್ ಟ್ರೆಂಡ್
ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿರುವುದಾಗಿ ಜನವರಿಯಲ್ಲಿ ಘೊಷಣೆ ಮಾಡಲಾಯಿತು. ಅದರ ಬೆನ್ನಲ್ಲೇ ಆರ್‌ಆರ್‌ಆರ್ ಟ್ವಿಟರ್‌ನಲ್ಲಿ ಟ್ರೆಂಡ್ ಆಯಿತು. ಅಭಿಮಾನಿಗಲು ಆರ್‌ಆರ್‌ಆರ್ ಬಗ್ಗೆ ತರೇವಾರು ಟ್ವೀಟ್‌ಗಳನ್ನು ಮಾಡಲಾರಂಭಿಸಿದರು. ಅದರಲ್ಲಿ ಕೆಲವು ಈ ಕೆಳಗಿನಂತಿವೆ.
ಆಸ್ಕರ್ ವೇದಿಕೆಯಲ್ಲಿ ನಾಟು ನಾಟು
ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿರುವ ನಾಟು ನಾಟು ಹಾಡನ್ನು ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತಿದೆ. ಹಾಡಿನ ಮೂಲ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಭೈರವ ಅವರು ಹಾಡಿನ ನೇರ ಪ್ರದರ್ಶನ ನೀಡಲಿದ್ದಾರೆ. ಹಾಲಿವುಡ್ ನಟಿ ಲಾರೆನ್ ಅವರು ನೃತ್ಯ ಮಾಡಲಿದ್ದಾರೆ. ಹಾಡಿನ ಪ್ರದರ್ಶನಕ್ಕೆ ಭಾರೀ ತಯಾರಿ ನಡೆಸಲಾಗುತ್ತಿರುವುದಾಗಿ ಸಂಯೋಜನರಾದ ಕೀರವಾಣಿ ಅವರು ತಿಳಿಸಿದ್ದಾರೆ. ಒಟ್ಟು ಎರಡೂವರೆ ನಿಮಿಷ ಈ ಪ್ರದರ್ಶನವಿರಲಿದೆ.
ಅಮೆರಿಕದಲ್ಲಿ ಮರು ಬಿಡುಗಡೆ
ಆರ್‌ಆರ್‌ಆರ್ ಸಿನಿಮಾ ಆಸ್ಕರ್ ವೇದಿಕೆಯಲ್ಲಿರುವ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಭಾರೀ ಪ್ರಚಾರ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಸಿನಿಮಾವನ್ನು ಅಮೆರಿಕದಲ್ಲಿ ಮಾರ್ಚ್ 3ರಂದು ಮರು ಬಿಡುಗಡೆ ಕೂಡ ಮಾಡಲಾಗಿದೆ. ಒಟ್ಟು 200 ತೆರೆಗಳಲ್ಲಿ ಸಿನಿಮಾ ಮರು ಬಿಡುಗಡೆಯಾಗಿದೆ. ಈ ಬಗ್ಗೆ ಅಮೆರಿಕದಲ್ಲಿ ಆರ್‌ಆರ್‌ಆರ್ ವಿತರಕರಾದ ವೇರಿಯನ್ಸ್ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿತ್ತು.