ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ (RRR Movie) ಬಿಡುಗಡೆಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದೆ. ಕಳೆದ ವರ್ಷ ಮಾರ್ಚ್ 24ರಂದು ಬಿಡುಗಡೆಯಾದ ಸಿನಿಮಾ ವಿಶ್ವಾದ್ಯಂತ ದೊಡ್ಡ ಹೆಸರನ್ನೇ ಮಾಡಿದೆ. ಸಿನಿಮಾದ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ, ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡು ಭಾರತಕ್ಕೇ ಕೀರ್ತಿಯ ಗರಿಯನ್ನೂ ತಂದುಕೊಟ್ಟಿದೆ. ಅದರ ಬೆನ್ನಲ್ಲೇ ಸಿನಿಮಾ ತಂಡ ಸಿನಿಮಾದ ಎರಡನೇ ಭಾಗವಾಗಿ ʼಆರ್‌ಆರ್‌ಆರ್ 2ʼ ಅನ್ನೂ ಘೋಷಿಸಿಕೊಂಡಿದ್ದು, ಅದರ ಬಗ್ಗೆ ಕೆಲವು ಮಾಹಿತಿ ಇಲ್ಲಿವೆ.
ಇದನ್ನೂ ಓದಿ: Oscars 2023: ದಿ ಎಲಿಫೆಂಟ್ ವಿಸ್ಪರರ್ಸ್, ಆರ್‌ಆರ್‌ಆರ್ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಆರ್‌ಆರ್‌ಆರ್ ಸಿನಿಮಾಕ್ಕೆ ಕಥೆ ಬರೆದವರು ರಾಜಮೌಳಿ ಅವರ ತಂದೆ ವಿ ವಿಜಯೇಂದ್ರ ಪ್ರಸಾದ್ ಅವರು. ಆರ್‌ಆರ್‌ಆರ್ ಸಿನಿಮಾ ಮಾಡುವಾಗ ರಾಜಮೌಳಿ ಆಗಲೀ ಅಥವಾ ವಿಜಯೇಂದ್ರ ಅವರಾಗಲೀ ಆರ್‌ಆರ್‌ಆರ್ 2 ಮಾಡುವ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಈ ವಿಚಾರವನ್ನು ರಾಜಮೌಳಿ ಅವರೇ ಹೇಳಿಕೊಂಡಿದ್ದರು. ಆದರೆ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಸಿನಿಮಾವನ್ನು ಮುಂದುವರಿಸುವ ಬಗ್ಗೆ ಕಲ್ಪನೆ ಬಂದಿದೆ. ಹಾಗಾಗಿ ಸಿನಿಮಾ ತಂಡ ಕುಳಿತುಕೊಂಡು ಚರ್ಚೆ ನಡೆಸಿದಾಗ ಸಿನಿಮಾವನ್ನು ಮುಂದುವರಿಸುವ ತೀರ್ಮಾನ ಮಾಡಲಾಗಿದೆ. ಚಿತ್ರಕ್ಕೆ ಆಸ್ಕರ್ ತಂದುಕೊಟ್ಟ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರೂ ಕೂಡ ಸಿನಿಮಾ ಮುಂದುವರಿಸೋಣ ಎಂದು ಹೇಳಿದ್ದಾಗಿ ಹೇಳಲಾಗಿದೆ.
ಪ್ರಿ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ
ರಾಜಮೌಳಿ ಅವರು ಹಾಗೆಯೇ ವಿಜಯೇಂದ್ರ ಪ್ರಸಾದ್ ಅವರು ಸದ್ಯ ಚಿತ್ರದ ಕಥೆಯ ಬಗ್ಗೆ ಕೆಲಸ ಮಾಡುತ್ತಿರುವುದಾಗಿ ರಾಜಮೌಳಿ ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧದ ಮತ್ತೊಂದು ಕ್ರಾಂತಿಕಾರಿ ಹೋರಾಟವನ್ನು ಸಾರಲಿದೆ. “ನನ್ನ ಎಲ್ಲ ಸಿನಿಮಾಕ್ಕೆ ನನ್ನ ತಂದೆಯೇ ಕಥೆ ಬರೆಯುವುದು. ಈಗ ಆರ್‌ಆರ್‌ಆರ್ ಕಥೆ ಬಗ್ಗೆಯೂ ನಾವಿಬ್ಬರೂ ಸೇರಿಕೊಂಡು ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಕಥಾವಸ್ತು ಏನಿರಬಹುದು?
ಆರ್‌ಆರ್‌ಆರ್ 2 ಸಿನಿಮಾದ ಕಥಾವಸ್ತುವಿನ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆರಂಭವಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮುರಂ ಭೀಮ್ ಅವರ ಜೀವನದಿಂದ ಪ್ರೇರಿತವಾದ ಕಾಲ್ಪನಿಕ ಕಥೆ ಎಂದು ಹೇಳಲಾಗಿದೆ. ತೆಲುಗು ರಾಜ್ಯಗಳ ಸ್ವಾತಂತ್ರ್ಯ ಪೂರ್ವದ ವಿಭಿನ್ನ ಕಥೆ ಇದಾಗಿರಲಿದೆ ಎಂದು ಚರ್ಚೆಗಳಿವೆ. ಆದರೆ ಇಲ್ಲಿಯವರೆಗೆ ಚಿತ್ರತಂಡ ಸಿನಿಮಾದ ಕಥೆ ವಿಚಾರದಲ್ಲಿ ಯಾವುದೇ ಅಧಿಕೃತ ದೃಢೀಕರಣ ಕೊಟ್ಟಿಲ್ಲ.
ಆರ್‌ಆರ್‌ಆರ್ ಬಗ್ಗೆ
ಆರ್‌ಆರ್‌ಆರ್ ಸಿನಿಮಾ ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು. ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಪ್ರಪಂಚದಾದ್ಯಂತ 1000 ಕೋಟಿ ರೂ.ಗೂ ಅಧಿಕ ಹಣ ಗಳಿಸಿಕೊಂಡಿದೆ.