Site icon Vistara News

RRR Movie: ಜಪಾನ್‌ನಲ್ಲಿ 200 ದಿನಗಳ ಕಾಲ ಪ್ರದರ್ಶನ ಕಂಡ ಆರ್‌ಆರ್‌ಆರ್‌: ಕಲೆಕ್ಷನ್‌ ಎಷ್ಟು?

RRR completes 200 days of uninterrupted run in Japan

ಬೆಂಗಳೂರು: ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್​ನಲ್ಲಿ ಸತತ 200 ದಿನ ಪ್ರದರ್ಶನ ಕಂಡಿದೆ. ಜಪಾನ್​ನಲ್ಲಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ. 200 ದಿನಗಳ ಕಾಲ ಪ್ರದರ್ಶನ ಕಂಡಿರುವ ಈ ಸಿನಿಮಾಗೆ ಜಪಾನ್​ನಲ್ಲಿ 119 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಜಪಾನ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಭಾರತದ ಸಿನಿಮಾ ಎಂಬ ಖ್ಯಾತಿಗೆ ‘ಆರ್​ಆರ್​ಆರ್​’ ಚಿತ್ರ ಪಾತ್ರವಾಗಿದೆ.

ಜಪಾನ್‌ನ 44 ನಗರಗಳು ಮತ್ತು ಪ್ರಿಫೆಕ್ಚರ್‌ಗಳಲ್ಲಿ 209 ಸ್ಕ್ರೀನ್‌ಗಳು ಮತ್ತು 31 ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ. 2022ರ ಡಿಸೆಂಬರ್‌ನಲ್ಲಿ, ಆರ್‌ಆರ್‌ಆರ್‌ ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಯಿತು, ಎರಡು ದಶಕಗಳ ಕಾಲ ದಾಖಲೆಯನ್ನು ಹೊಂದಿದ್ದ ರಜನಿಕಾಂತ್ ಅವರ ʻಮುತ್ತುʼ ಸಿನಿಮಾ ಹಿಂದಿಕ್ಕಿದೆ. 24 ವರ್ಷಗಳ ಹಿಂದೆ ಬಿಡುಗಡೆಯಾದ ಮುತ್ತು, 40 ಕೋಟಿ ರೂ. ಬಾಕ್ಸ್ ಆಫೀಸ್ ಸಂಗ್ರಹದೊಂದಿಗೆ ಜಪಾನ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿತ್ತು.

ಇದನ್ನೂ ಓದಿ: RRR Movie : ಗ್ಲೋಬಲ್​ ಕ್ರೇಜ್​, ಬೇಸ್​ ಬಾಲ್​ ಸ್ಟೇಡಿಯಮ್​​ನಲ್ಲಿ ನಾಟು ನಾಟು ಹಾಡಿಗೆ ಸಕತ್ ಡಾನ್ಸ್​

ಆರ್‌ಆರ್‌ಆರ್‌ ಸಿನಿಮಾ ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು. ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಪ್ರಪಂಚದಾದ್ಯಂತ 1000 ಕೋಟಿ ರೂ.ಗೂ ಅಧಿಕ ಹಣ ಗಳಿಸಿಕೊಂಡಿದೆ.

ಅದರ ಬೆನ್ನಲ್ಲೇ ಸಿನಿಮಾ ತಂಡ ಸಿನಿಮಾದ ಎರಡನೇ ಭಾಗವಾಗಿ ʼಆರ್‌ಆರ್‌ಆರ್‌ 2ʼ ಅನ್ನೂ ಘೋಷಿಸಿಕೊಂಡಿದ್ದು, ಅದರ ಬಗ್ಗೆ ಕೆಲವು ಮಾಹಿತಿ ಇಲ್ಲಿವೆ.

ಆರ್‌ಆರ್‌ಆರ್‌ ಸಿನಿಮಾಕ್ಕೆ ಕಥೆ ಬರೆದವರು ರಾಜಮೌಳಿ ಅವರ ತಂದೆ ವಿ ವಿಜಯೇಂದ್ರ ಪ್ರಸಾದ್‌ ಅವರು. ಆರ್‌ಆರ್‌ಆರ್‌ ಸಿನಿಮಾ ಮಾಡುವಾಗ ರಾಜಮೌಳಿ ಆಗಲೀ ಅಥವಾ ವಿಜಯೇಂದ್ರ ಅವರಾಗಲೀ ಆರ್‌ಆರ್‌ಆರ್‌ 2 ಮಾಡುವ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಈ ವಿಚಾರವನ್ನು ರಾಜಮೌಳಿ ಅವರೇ ಹೇಳಿಕೊಂಡಿದ್ದರು. ಆದರೆ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಸಿನಿಮಾವನ್ನು ಮುಂದುವರಿಸುವ ಬಗ್ಗೆ ಕಲ್ಪನೆ ಬಂದಿದೆ. ಹಾಗಾಗಿ ಸಿನಿಮಾ ತಂಡ ಕುಳಿತುಕೊಂಡು ಚರ್ಚೆ ನಡೆಸಿದಾಗ ಸಿನಿಮಾವನ್ನು ಮುಂದುವರಿಸುವ ತೀರ್ಮಾನ ಮಾಡಲಾಗಿದೆ. ಚಿತ್ರಕ್ಕೆ ಆಸ್ಕರ್‌ ತಂದುಕೊಟ್ಟ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರೂ ಕೂಡ ಸಿನಿಮಾ ಮುಂದುವರಿಸೋಣ ಎಂದು ಹೇಳಿದ್ದಾಗಿ ಹೇಳಲಾಗಿದೆ.

ರಾಜಮೌಳಿ ಅವರು ಹಾಗೆಯೇ ವಿಜಯೇಂದ್ರ ಪ್ರಸಾದ್‌ ಅವರು ಸದ್ಯ ಚಿತ್ರದ ಕಥೆಯ ಬಗ್ಗೆ ಕೆಲಸ ಮಾಡುತ್ತಿರುವುದಾಗಿ ರಾಜಮೌಳಿ ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಬ್ರಿಟಿಷ್‌ ವಸಾಹತುಶಾಹಿಗಳ ವಿರುದ್ಧದ ಮತ್ತೊಂದು ಕ್ರಾಂತಿಕಾರಿ ಹೋರಾಟವನ್ನು ಸಾರಲಿದೆ. “ನನ್ನ ಎಲ್ಲ ಸಿನಿಮಾಕ್ಕೆ ನನ್ನ ತಂದೆಯೇ ಕಥೆ ಬರೆಯುವುದು. ಈಗ ಆರ್‌ಆರ್‌ಆರ್‌ ಕಥೆ ಬಗ್ಗೆಯೂ ನಾವಿಬ್ಬರೂ ಸೇರಿಕೊಂಡು ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

Exit mobile version