ಬೆಂಗಳೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (RRR Movie) ಚಿತ್ರವೀಗ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್‌ನ ಐದು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. 2023ರ ಸಾಲಿನ ನಾಮನಿರ್ದೇಶನಗಳು ಇತ್ತೀಚೆಗಷ್ಟೇ ಹೊರಬಿದ್ದಿದ್ದು, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ವಿದೇಶಿ ಚಲನಚಿತ್ರ, ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ವಿಶುವಲ್ ಇಫೆಕ್ಟ್ಸ್ ವಿಭಾಗಗಳಲ್ಲಿ ಸ್ಪರ್ಧೆಗಿಳಿದಿದೆ. ಈ ಚಿತ್ರದ ನಟಿ ಆಲಿಯಾ ಭಟ್ ಇನ್‌ಸ್ಟಾ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಚಿತ್ರವಿಭಾಗದಲ್ಲಿ ʻʻಅವತಾರ್: ದಿ ವೇ ಅಫ್ ವಾಟರ್ʼʼ, ʻʻಬ್ಯಾಬಿಲೋನ್ʼʼ, ʻʻದ ಬನ್‌ಶೀಸ್ ಆಫ್ ಇನಿಶೆರಿನ್ಸ್ʼʼ, ʻಎಲ್ವಿಸ್ʼ, ʻಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ವನ್ಸ್ʼ, ʻದ ಫೇಬಲ್‌ಮ್ಯಾನ್ಸ್ʼ, ʻಗ್ಲಾಸ್ ಆನಿಯನ್: ಎ ನೈವ್ಸ್ ಔಟ್ ಮಿಸ್ಟರಿʼ, ʻಟಾರ್ʼ, ʻಟಾಪ್ ಗನ್: ಮೆವೆರಿಕ್ʼ, ʻವಿಮೆನ್ ಟಾಕಿಂಗ್ʼ- ಇದಿಷ್ಟು ಚಿತ್ರಗಳಿಂದ ಆರ್‌ಆರ್‌ಆರ್ ಸ್ಪರ್ಧೆಯನ್ನು ಎದುರಿಸಲಿದೆ.
ಇದನ್ನೂ ಓದಿ | RRR Movie | ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಆರ್‌ಆರ್‌ಆರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗುತ್ತಾ?
ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ- ಜೇಮ್ಸ್ ಕ್ಯಾಮರಾನ್ (ಅವತಾರ್: ದಿ ವೇ ಆಫ್ ವಾಟರ್), ಡೇಮಿಯನ್ ಚಾಸೆಲ್ (ಬ್ಯಾಬಿಲೋನ್), ಟಾಡ್ ಫೀಲ್ಡ್ (ಟಾರ್), ಬಝ್ ಲರ್ಹಮನ್ (ಎಲ್ವಿಸ್), ಡೇನಿಯಲ್ ಕ್ವಾನ್, ಡೇನಿಯಲ್ ಶೇನರ್ಟ್ (ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ವನ್ಸ್ ), ಮಾರ್ಟಿನ್ ಮೆಕ್‌ಡೋನಾ (ದ ಬನ್‌ಶೀಸ್ ಆಫ್ ಇನಿಶೆರಿನ್ಸ್), ಸಾರಾ ಪಾಲಿ (ವಿಮೆನ್ ಟಾಕಿಂಗ್), ಗಿನಾ ಪ್ರಿನ್ಸ್ (ಬೈ ದ ವುಡ್- ದ ವುಮನ್ ಕಿಂಗ್), ಸ್ಟೀವನ್ ಸ್ಪಿಲ್‌ಬರ್ಗ್ (ದ ಫೇಬಲ್‌ಮ್ಯಾನ್ಸ್)- ಇದಿಷ್ಟೂ ನಿರ್ದೇಶಕರೊಂದಿಗೆ ರಾಜಮೌಳಿ ಸ್ಪರ್ಧೆಗೆ ಇಳಿಯಬೇಕಿದೆ.
ತಮ್ಮ ನಟನೆಯ ʻʻಆರ್‌ಆರ್‌ಆರ್ʼʼ ಚಿತ್ರವು ವಿಶ್ವದ ಎಲ್ಲೆಡೆಯಿಂದ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಮತ್ತು ಹಲವು ಚಿತ್ರೋತ್ಸವಗಳಲ್ಲಿ ಹೆಸರು ಕೇಳಿಬರುತ್ತಿರುವ ಬಗ್ಗೆ ʻವಾಹ್ʼ ಎಂಬ ಉದ್ಗಾರದ ಮೂಲಕ ಆಲಿಯಾ ಭಟ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಗೋಲ್ಡನ್ ಗ್ಲೋಬ್ ಪುರಸ್ಕಾರದಲ್ಲೂ ಈಗಾಗಲೇ ಎರಡು ವಿಭಾಗಗಳಲ್ಲಿ ಈ ಚಿತ್ರ ನಾಮನಿರ್ದೇಶನಗೊಂಡಿದೆ.
ಇದನ್ನೂ ಓದಿ | RRR MOVIE | ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಆರ್‌ಆರ್‌ಆರ್ ನಾಮನಿರ್ದೇಶನ