Site icon Vistara News

RRR Movie | ಆರ್‌ಆರ್‌ಆರ್‌ -2 ಸೀಕ್ವೆಲ್‌ನ ಕೆಲಸ ಶುರು: ನಿರ್ದೇಶಕ ರಾಜಮೌಳಿ ಹೇಳಿದ್ದೇನು?

RRR Movie

ಬೆಂಗಳೂರು : ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಎರಡನೇ ಭಾಗದ (RRR Movie) ಸೀಕ್ವೆಲ್‌ನ ಕೆಲಸಗಳು ಪ್ರಾರಂಭಗೊಂಡಿದೆ ಎಂದು ಸ್ವತಃ ರಾಜಮೌಳಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಈಗಾಗಲೇ ಸ್ಕ್ರಿಪ್ಟ್‌ ಕೆಲಸಗಳು ಪ್ರಾರಂಭಗೊಂಡಿದ್ದು, ಆರ್‌ಆರ್‌ಆರ್‌-2 ಸಿನಿಮಾಗಾಗಿ ಮೊದಲ ಡ್ರಾಪ್ಟ್‌ ಅನ್ನು ರಾಜಮೌಳಿ ಅವರ ತಂದೆ ಬರೆದಿಟ್ಟಿದ್ದಾರೆ ಎಂದು ಅಮೆರಿಕನ್‌ ಮಾಧ್ಯಮ ಕಂಪನಿಯೊಂದು ವರದಿ ಮಾಡಿದೆ. ಆರ್‌ಆರ್‌ಆರ್‌-1 ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಮೊದಲ ಸಿನಿಮಾ ಆಗಿದ್ದು, ವಿಶ್ವಾದ್ಯಂತ ಮೆಚ್ಚುಗೆ ಗಳಿಸಿ ಭಾರಿ ಗಳಿಕೆ ಕಂಡಿತ್ತು.

ಎರಡನೇ ಭಾಗದ ಕುರಿತು ರಾಜಮೌಳಿ ಅವರ ಸೋದರಸಂಬಂಧಿ ಎಂಎಂ ಕೀರವಾಣಿ ಮಾತನಾಡಿ ʻ’ಚಿತ್ರದ ಕುರಿತು ಯಾವುದೇ ಆರಂಭಿಕ ಯೋಜನೆಗಳಿರಲಿಲ್ಲ. ಆರ್‌ಆರ್‌ಆರ್‌ ಮೊದಲ ಭಾಗಕ್ಕೆ ಜನರು ತೋರಿಸಿದ ಪ್ರೀತಿಗೆ ಎರಡನೇ ಭಾಗ ಮಾಡಬೇಕೆಂದು ತಂಡ ಯೋಜಿಸಿದೆ. ಈಗಾಗಲೇ ಕೆವಿ ವಿಜಯೇಂದ್ರ ಪ್ರಸಾದ್ ಅವರು ಕಥೆಯನ್ನು ಬರೆಯಲು ಪ್ರಾರಂಭಿಸಿದ್ದಾರೆ. ಎರಡನೇ ಭಾಗ ಅತ್ಯಂತ ಕುತೂಹಲಕಾರಿಯಾಗಿರುತ್ತದೆʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | RRR MOVIE | ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯ ಎರಡು ವಿಭಾಗಗಳಿಗೆ ಆರ್‌ಆರ್‌ಆರ್‌ ನಾಮನಿರ್ದೇಶನ

ರಾಜಮೌಳಿ ಮಾತನಾಡಿ ʻʻಎರಡನೇ ಭಾಗವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಈ ಸ್ಕ್ರಿಪ್ಟ್ ಮುಗಿದ ನಂತರ ನಾವು ಅದನ್ನು ಹೇಗೆ ತಯಾರಿಸಬೇಕು, ಯಾವಾಗ ತಯಾರಿಸಬೇಕು ಮತ್ತು ಅದನ್ನು ತೆರೆಯ ಮೇಲೆ ಹೇಗೆ ತರಬೇಕು ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಮುಂದೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆʼʼ ಎಂದು ಹೇಳಿಕೆ ನೀಡಿದ್ದಾರೆ.

ಆರ್‌ಆರ್‌ಆರ್‌ (RRR MOVIE) 2023ರ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ನ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಇಂಗ್ಲಿಷ್‌ ಹೊರತಾದ ಭಾಷೆಯ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಹಾಡು (ನಾಟು ನಾಟು) ವಿಭಾಗಗಳಲ್ಲಿ ನಾಮಾಂಕಿತಗೊಂಡಿದೆ. ಆಸ್ಕರ್‌ 2023ರ ಬೇರೆಬೇರೆ 15 ವಿಭಾಗಗಳಲ್ಲಿ ಆರ್‌ಆರ್‌ಆರ್‌ ಸ್ಪರ್ಧೆಗೆ ಪ್ರಯತ್ನಿಸುತ್ತಿದೆ. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ನಟಿ, ಅತ್ಯುತ್ತಮ- ಹಾಡು, ಸ್ಕ್ರೀನ್‌ಪ್ಲೇ, ಸಂಕಲನ, ಸಿನೆಮಾಟೋಗ್ರಫಿ, ವಸ್ತ್ರವಿನ್ಯಾಸ, ಮೇಕಪ್‌ ಮುಂತಾದ ಒಟ್ಟು 15 ವಿಭಾಗಗಳಲ್ಲಿ ಸ್ಪರ್ಧೆಗೆ ಪ್ರಯತ್ನ ನಡೆದಿದೆ.

ಈಗಾಗಲೇ ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಚಿತ್ರಕ್ಕೆ ಮನ್ನಣೆ ಪ್ರಾಪ್ತವಾಗಿದೆ. ನ್ಯೂಯಾರ್ಕ್‌ ಫಿಲ್ಮ್‌ ಕ್ರಿಟಿಕ್‌ ಸರ್ಕಲ್‌ ಅವಾರ್ಡ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಅಟ್ಲಾಂಟ ಫಿಲ್ಮ್‌ ಕ್ರಿಟಿಕ್‌ ಅವಾರ್ಡ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ಆರ್‌ಆರ್‌ಆರ್‌ ಮುಡಿಗೇರಿಸಿಕೊಂಡಿದೆ. ಆರ್‌ಆರ್‌ಆರ್‌ ಚಿತ್ರ ಗಳಿಕೆಯ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈವರೆಗೆ 1200 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ | RRR Movie | ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ನಲ್ಲೂ ಆರ್‌ಆರ್‌ಆರ್‌ ಹವಾ: ಆಲಿಯಾ ಭಟ್‌ ಪೋಸ್ಟ್‌ ವೈರಲ್‌!

Exit mobile version