ಬೆಂಗಳೂರು : ರಾಜಮೌಳಿ ನಿರ್ದೇಶನದ RRR ಸಿನಿಮಾ (RRR Movie ), ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. RRR ಐತಿಹಾಸಿಕ ಗೋಲ್ಡನ್ ಗ್ಲೋಬ್ ಗೆಲುವಿನ ಬಗ್ಗೆ ಭಾರತೀಯರು ಸಂತೋಷಪಟ್ಟಿದ್ದಾರೆ. ಸೆಲೆಬ್ರಿಟಿಗಳು ಟ್ವೀಟ್ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಎಸ್‌ಎಸ್ ರಾಜಮೌಳಿ ಅವರು ತಂಡದ ಗೆಲುವಿಗಾಗಿ ಜನರಿಗೆ ಧನ್ಯವಾದ ಹೇಳಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಟ್ವೀಟ್ ಮಾಡಿ ʻʻಸರ್ ಈಗಷ್ಟೇ ಎಚ್ಚರಗೊಂಡು ಗೋಲ್ಡನ್ ಗ್ಲೋಬ್‌ನಲ್ಲಿ ನಿಮ್ಮ ಗೆಲುವನ್ನು ಸಂಭ್ರಮಿಸುತ್ತಾ ನಾಟು ನಾಟುಗೆ ನೃತ್ಯ ಮಾಡಲು ಪ್ರಾರಂಭಿಸಿದೆ. ಇನ್ನಷ್ಟು ಪ್ರಶಸ್ತಿಗಳು ಬರಲಿ. ಆರ್‌ಆರ್‌ಆರ್ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆʼʼ ಎಂದು ಬರೆದುಕೊಂಡಿದ್ದಾರೆ.
ನಟ ಚಿರಂಜೀವಿ ಟ್ವೀಟ್ ಮಾಡಿ ʻʻಎಂತಹ ಅಪೂರ್ವ, ಐತಿಹಾಸಿಕ ಸಾಧನೆ. ಆರ್‌ಆರ್‌ಆರ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆʼʼಎಂದಿದ್ದಾರೆ.
ಇದನ್ನೂ ಓದಿ | RRR Movie | ಆರ್‌ಆರ್‌ಆರ್ ಹಿಂದಕ್ಕೆಳೆಯುವ ಚಿತ್ರ ಎಂದು ಟೀಕಿಸಿದ ನಟಿ ರತ್ನಾ ಪಾಠಕ್ ಶಾ!
ಎ.ಆರ್. ರೆಹಮಾನ್ ಟ್ವೀಟ್ ಮಾಡಿ, ಇದೊಂದು “ಇನ್‌ಕ್ರೆಡಿಬಲ್.. ಪ್ಯಾರಾಡಿಗ್ಮ್ ಶಿಫ್ಟ್” ಎಂದು ಹೇಳಿದ್ದಾರೆ ಮತ್ತು ಆರ್‌ಆರ್‌ಆರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ʻʻಪ್ರತಿಯೊಬ್ಬ ಭಾರತೀಯರು ಹೆಮ್ಮೆಯ ವಿಷಯ ಇದಾಗಿದೆ. ಇದು ಬಹಳ ವಿಶೇಷ ಸಾಧನೆ. ಎಂಎಂ ಕೀರವಾಣಿ, ರಾಜಮೌಳಿ, ರಾಮ್ ಚರಣ್, ಜೂನಿಯರ್ ಎನ್ ಟಿಆರ್ ಸೇರಿದಂತೆ ಇಡೀ ತಂಡಕ್ಕೆ ಶುಭಾಶಯʼʼ ಎಂದಿದ್ದಾರೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿ ʻʻಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಆರ್‌ಆರ್‌ಆರ್ ತಂಡಕ್ಕೆ ಅಭಿನಂದನೆಗಳು. ಇದು ಅತ್ಯಂತ ಅರ್ಹವಾದ ಸಾಧನೆ. ನೀವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿʼʼಎಂದಿದ್ದಾರೆ.
80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಇದೀಗ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ. ಕ್ಯಾಲಿಫೋರ್ನಿಯಾದ ಬವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜೊತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.
ಆಂಗ್ಲೇತರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಲ್ಯಾಟಿನ್ ಅಮೆರಿಕನ್ ಚಿತ್ರ ಸ್ಯಾಮ್ ಮಿತ್ರೆ ನಿರ್ದೇಶನದ “ಅರ್ಜೆಂಟೀನಾ, 1985′ ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ʼದಿ ಫೇಬಲ್‌ಮನ್ʼ ಚಿತ್ರಕ್ಕಾಗಿ ಸ್ಟೀವನ್ ಸ್ಪೀಲ್‌ಬರ್ಗ್ ಗೆದ್ದುಕೊಂಡಿದ್ದಾರೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 2023ರ ಬೇರೆಬೇರೆ ವಿಭಾಗಗಳಲ್ಲಿ ಕೂಡ ಆರ್‌ಆರ್‌ಆರ್ ಸ್ಪರ್ಧೆಗೆ ಅರ್ಹತೆ ಪಡೆದಿದೆ. ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಚಿತ್ರಕ್ಕೆ ಈಗಾಗಲೇ ಮನ್ನಣೆ ಪ್ರಾಪ್ತವಾಗಿದೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಸರ್ಕಲ್ ಅವಾರ್ಡ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಅಟ್ಲಾಂಟ ಫಿಲ್ಮ್ ಕ್ರಿಟಿಕ್ ಅವಾರ್ಡ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ಆರ್‌ಆರ್‌ಆರ್ ಮುಡಿಗೇರಿಸಿಕೊಂಡಿದೆ. ಗಳಿಕೆಯ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಈವರೆಗೆ 1200 ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ | RRR Movie | ಆರ್‌ಆರ್‌ಆರ್ -2 ಸೀಕ್ವೆಲ್‌ನ ಕೆಲಸ ಶುರು: ನಿರ್ದೇಶಕ ರಾಜಮೌಳಿ ಹೇಳಿದ್ದೇನು?