Site icon Vistara News

Salaar Box Office: ʼಬಾಹುಬಲಿ 1ʼ, ʼಪುಷ್ಪ 1ʼ ಕಲೆಕ್ಷನ್‌ ಹಿಂದಿಕ್ಕಿದ ʼಸಲಾರ್‌ʼ ಗಳಿಸಿದ್ದೆಷ್ಟು?

salaar

salaar

ಬೆಂಗಳೂರು: ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಕನ್ನಡಿಗರು ಕಮಾಲ್‌ ಮಾಡಿದ್ದಾರೆ. ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರಶಾಂತ್‌ ನೀಲ್‌ (Prashanth Neel) ಆ್ಯಕ್ಷನ್‌ ಕಟ್‌ ಹೇಳಿರುವ ಪ್ಯಾನ್‌ ಇಂಡಿಯಾ ಚಿತ್ರ ಸಲಾರ್‌: ಪಾರ್ಟ್‌ 1-ಸೀಸ್‌ಫೈರ್‌ (Salaar: Part 1 – Ceasefire) ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಜಾಗತಿಕವಾಗಿ ಪ್ರಭಾಸ್‌ (Prabhas) ಅಭಿನಯದ ಈ ಚಿತ್ರ 500 ಕೋಟಿ ರೂ. ಗಡಿ ದಾಟಿ ಮುನ್ನಡೆಯುತ್ತಿದೆ. ಈ ಮೂಲಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಟಾಲಿವುಡ್‌ ರೆಬಲ್‌ ಸ್ಟಾರ್‌ಗೆ ದೊಡ್ಡದೊಂದು ಬ್ರೇಕ್‌ ಸಿಕ್ಕಂತಾಗಿದೆ (Salaar Box Office).

ಈ ಚಿತ್ರ ಕೇವಲ ನಾಲ್ಕು ದಿನಗಳಲ್ಲಿ ಭಾರತದಲ್ಲಿ 250 ಕೋಟಿ ರೂ. ಗಡಿ ದಾಟುವ ಮೂಲಕ ಮತ್ತೊಂದು ದಾಖಲೆಯನ್ನು ಮುರಿದಿದೆ. ಮೊದಲ ದಿನವೇ ಚಿತ್ರ ವಿಶ್ವಾದ್ಯಂತ 178.7 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು. ಸಿನಿಮಾ ತೆರೆಕಂಡ ಕೇವಲ 6 ದಿನಗಳಲ್ಲಿ 500 ಕೋಟಿ ರೂ. ಮ್ಯಾಜಿಕ್‌ ನಂಬರ್‌ ದಾಟಿದೆ. ಚಿತ್ರತಂಡ ಅಧಿಕೃತವಾಗಿ ಈ ವಿಚಾರವನ್ನು ಹಂಚಿಕೊಂಡಿದೆ. ʼಬಾಹುಬಲಿʼ ಸರಣಿ ಬಳಿಕ ಪ್ರಭಾಸ್‌ಗೆ ಅತೀ ದೊಡ್ಡ ಗೆಲುವು ಈ ಚಿತ್ರದ ಮೂಲಕ ಲಭಿಸಿದೆ.

ವಿಜಯ್‌ ಕಿರಗಂದೂರು ಮಾಲಕತ್ವದ ಹೊಂಬಾಳೆ ಫಿಲ್ಮ್ಸ್‌ ಈ ಚಿತ್ರವನ್ನು ನಿರ್ಮಿಸಿದೆ. ʼಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಬಹುದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್‌ ಇನ್ನೊಂದು ಗೆಲುವು ದಾಖಲಿಸಿದೆ. ʼಸಲಾರ್‌ 1′ ಈಗಾಗಲೇ ‘ಕೆಜಿಎಫ್‌ ಚಾಪ್ಟರ್‌ 1’, ‘ಪುಷ್ಪ 1’ ಮತ್ತು ‘ಬಾಹುಬಲಿ 1’ ಚಿತ್ರಗಳ ಕಲೆಕ್ಷನ್‌ ಮೀರಿದೆ. ‘ಸಲಾರ್‌’ ತೆರೆಕಂಡ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲೆಯಾಳಂ ಹೀಗೆ ಎಲ್ಲ ಭಾಷೆಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ.

ಕುತೂಹಲ ಕೆರಳಿಸಿದ ಎರಡನೇ ಭಾಗ

ಸ್ನೇಹಿತರಿಬ್ಬರ ಕಥೆ ಹೇಳುವ ‘ಸಲಾರ್‌ ಪಾರ್ಟ್‌ 1’ ತನ್ನ ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆದಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ‘ಉಗ್ರಂ’ ಚಿತ್ರದ ಕಥೆಯನ್ನೇ ಈ ಸಿನಿಮಾ ಹೋಲುತ್ತದೆ. ಅಲ್ಲದೆ ‘ಕೆಜಿಎಫ್‌’ ಸಿನಿಮಾ ಮಾದರಿಯಲ್ಲೇ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ ಎಂದು ಕೆಲವು ನೆಗೆಟಿವ್‌ ವಿಮರ್ಶೆಗಳ ಹೊರತಾಗಿಯೂ ಇದು ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರದ ಎರಡನೇ ಭಾಗ ʼಸಲಾರ್‌ ಪಾರ್ಟ್‌ 2: ಶೌರ್ಯಾಂಗ ಪರ್ವಂʼ ಬಿಡುಗಡೆಗಾಗಿ ಅಭಿಮಾನಿಗಳು ಕಾಯುವಂತಾಗಿದೆ.

ಇದನ್ನೂ ಓದಿ: Salaar Movie: ಸಲಾರ್‌ ಒಟಿಟಿ ಸ್ಟ್ರೀಮಿಂಗ್‌ ಎಲ್ಲಿ?

ʼಸಲಾರ್‌ 1ʼ ಚಿತ್ರದಲ್ಲಿ ಮಾಲಿವುಡ್‌ ಸೂಪರ್‌ ಸ್ಟಾರ್‌, ಬಹುಭಾಷಾ ನಟ ಪೃಥ್ವಿರಾಜ್‌ ಸುಕುಮಾರನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್‌ ಜತೆಗೆ ಇವರ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕಿಯಾಗಿ ಶ್ರುತಿ ಹಾಸನ್‌ ಅಭಿನಯಿಸಿದ್ದಾರೆ. ಅಲ್ಲದೆ ಜಗಪತಿ ಬಾಬು ವಿಲನ್‌ ಆಗಿ ಮಿಂಚಿದ್ದಾರೆ. ವಿಶೇಷ ಎಂದರೆ ಇದರಲ್ಲಿ ಹಲವು ಕನ್ನಡ ನಟರೂ ಬಣ್ಣ ಹಚ್ಚಿದ್ದಾರೆ. ನವೀನ್‌ ಶಂಕರ್‌, ಪ್ರಮೋದ್‌ ಪಂಜು ಮತ್ತಿತರ ಕನ್ನಡ ಮೂಲದ ಕಲಾವಿದರ ಅಭಿನಯಕ್ಕೂ ಪ್ರೇಕ್ಷಕರು ಜೈ ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version