ಹೈದರಾಬಾದ್: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರು ಈ ಬಾರಿ ತೆಲುಗು ನಟ ಪ್ರಭಾಸ್ ಅವರನ್ನು ತೆರೆ ಮೇಲೆ ಮಿಂಚಿಸುವುದಕ್ಕೆ ಸಿದ್ಧರಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಸಲಾರ್ ಸಿನಿಮಾ (Salaar Movie) ಇದೇ ವರ್ಷ ಸೆಪ್ಟೆಂಬರ್‌ಗೆ ತೆರೆ ಕಾಣಲಿದೆ. ಆದರೆ ಈ ಸಿನಿಮಾ ಬಿಡುಗಡೆಗೂ ಮೊದಲೇ 800 ಕೋಟಿ ರೂ. ಗಳಿಸಿಕೊಂಡಿದೆ. ಎರಡನೇ ಭಾಗದ ಮುಂಗಡ ಗಳಿಕೆಯೂ ಸೇರಿದರೆ ಈ ಮೊತ್ತ 1000 ಕೋಟಿ ರೂ. ದಾಟುತ್ತದೆ ಎನ್ನುವ ವರದಿಯೊಂದು ಇದೀಗ ಹರಿದಾಡಲಾರಂಭಿಸಿದೆ.
ಹೌದು. ವರದಿಗಳ ಪ್ರಕಾರ ಚಿತ್ರದ ತಯಾರಕರು ಸಿನಿಮಾ ಬಿಡುಗಡೆಗೆ ಮೊದಲೇ ಅದರ ಡಿಜಿಟಲ್, ಥಿಯೇಟ್ರಿಕಲ್, ಸ್ಯಾಟಲೈಟ್ ಮತ್ತು ಸಂಗೀತದ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ವಿದೇಶದಲ್ಲಿ ಸಿನಿಮಾ ಪ್ರದರ್ಶನಕ್ಕೆ ಹಕ್ಕು ಖರೀದಿಸಿದ ಸಂಸ್ಥೆಯೇ ಬರೋಬ್ಬರಿ 80 ಕೋಟಿ ರೂ. ಅನ್ನು ಚಿತ್ರತಂಡಕ್ಕೆ ನೀಡಿದೆಯಂತೆ. ಹಾಗೆಯೇ ತೆಲುಗು ಭಾಷೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಿನಿಮಾ ಪ್ರದರ್ಶನ ಹಕ್ಕು ಮಾರಾಟದಿಂದ ಸರಿ ಸುಮಾರು 200 ಕೋಟಿ ರೂ. ಗಳಿಸಿಕೊಂಡಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಈ ಸಿನಿಮಾ ಈಗಾಗಲೇ 800 ಕೋಟಿ ರೂ. ಗಳಿಕೆ ಕಂಡಿದೆ ಎನ್ನುವುದು ವರದಿಗಳಲ್ಲಿರುವ ಮಾಹಿತಿ.
ಇದನ್ನೂ ಓದಿ: Salaar Movie : ಅಮೆರಿಕದಲ್ಲಿ ದಾಖಲೆ ಬರೆಯಲಿದೆ ಪ್ರಭಾಸ್‌ನ ಸಲಾರ್; ಶುರುವಾಗಿದೆ 1979 ಲೆಕ್ಕಾಚಾರ!
ಅಂದ ಹಾಗೆ ಈ ವರ್ಷ ಬಿಡುಗಡೆಯಾಗುತ್ತಿರುವುದು ಸಲಾರ್: ಪಾರ್ಟ್ 1 ಕೇಸ್‌ಫೈರ್ ಮಾತ್ರ. ಮುಂದೆ ಇದೇ ಸಿನಿಮಾದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ. ಅದರದ್ದೂ ಕೆಲವು ಹಕ್ಕುಗಳು ಕೂಡ ಭಾರೀ ಬೆಲೆಗೆ ಮಾರಾಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಎರಡೂ ಪಾರ್ಟ್‌ಗಳಿಂದ ಒಟ್ಟಾರೆಯಾಗಿ 1000 ಕೋಟಿ ರೂ. ಸಿನಿಮಾ ಬಿಡುಗಡೆಗೆ ಮೊದಲೇ ನಿರ್ಮಾಪಕರ ಕೈ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಲಾರ್ ಸಿನಿಮಾದ ಟೀಸರ್ ಅನ್ನು ಜುಲೈ 5ರಂದು ಬಿಡುಗಡೆ ಮಾಡಲಾಗಿತ್ತು. ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲೇ 1.1 ಕೋಟಿ ಜನರಿಂದ ವೀಕ್ಷಣೆಗೊಂಡಿತ್ತು. ಆ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿತ್ತು. ಈ ಟೀಸರ್ ಈಗಾಗಲೇ 8.4 ಕೋಟಿ ಜನರಿಂದ ವೀಕ್ಷಣೆಗೊಂಡಿದೆ.
ಇದನ್ನೂ ಓದಿ: Rajinikanth : ಲಾಲ್ ಸಲಾಂ ಮುಗಿದ ಬೆನ್ನಲ್ಲೇ ಮಾಲ್ಡೀವ್ಸ್‌ನಲ್ಲಿ ಜಾಲಿ ಮೂಡ್‌ನಲ್ಲಿ ರಜನಿಕಾಂತ್
ಸಲಾರ್ ಬಿಡುಗಡೆಗೆ ಮೊದಲೇ ಅದರ ಬಗ್ಗೆ ಕಾಣಿಸಿಕೊಳ್ಳುತ್ತಿರುವ ಕ್ರೇಜ್ ನೋಡಿದರೆ ಈ ಸಿನಿಮಾ ಬೇರೆಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುವ ಸಾಧ್ಯತೆಯಿದೆ. ಕೆಜಿಎಫ್, ಬಾಹುಬಲಿ, ಪಠಾಣ್ ಸಿನಿಮಾಗಳ ಗಳಿಕೆಗಳನ್ನೂ ಮೀರಿದ ಗಳಿಕೆ ಈ ಸಿನಿಮಾಕ್ಕೆ ಸಿಗುವ ಸಾಧ್ಯತೆಯಿದೆ.