ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿದ್ದ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್‌ಗೆ (Prabhas) ʼಸಲಾರ್ʼ ಚಿತ್ರದ (Salaar Movie) ರೂಪದಲ್ಲಿ ಬಹುದೊಡ್ಡ ಗೆಲುವು ಲಭಿಸಿದೆ. ಸ್ಯಾಂಡಲ್‌ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಪ್ಯಾನ್ ಇಂಡಿಯಾ ಚಿತ್ರ ಸಲಾರ್: ಪಾರ್ಟ್ 1-ಸೀಸ್‌ಫೈರ್ (Salaar: Part 1 – Ceasefire) ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಹೊಸ ವರ್ಷದ ಸಂಭ್ರಮಾಚರಣೆ ಮಧ್ಯೆ ʼಸಲಾರ್ʼ ಚಿತ್ರ ದೇಶೀಯ ಮಾರುಕಟ್ಟೆಯಲ್ಲಿ 400 ಕೋಟಿ ರೂ. ಗಡಿ ತಲುಪಿದೆ. ವಾರದ ದಿನಗಳಲ್ಲಿ ಕುಸಿತ ಕಂಡಿದ್ದ ಸಿನಿಮಾದ ಗಳಿಕೆ ವಾರಾಂತ್ಯದ ವೇಳೆ ಮತ್ತೆ ಹೆಚ್ಚಾಗಿದೆ. ಸದ್ಯ ಇದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂ. ಕಲೆಕ್ಷನ್ ಮಾಡಿದೆ.
2023ರ ಡಿಸೆಂಬರ್ 22ರಂದು ತೆರೆಕಂಡ ‘ಸಲಾರ್- ಪಾರ್ಟ್ 1’ ಚಿತ್ರ 11ನೇ ದಿನ ಭಾರತದಲ್ಲಿ 15.5 ಕೋಟಿ ರೂ. ಗಳಿಸುವುದರೊಂದಿಗೆ ಒಟ್ಟು 360.77 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾದ ಚಿತ್ರವಾದ ಇದರ ಗಳಿಕೆಯಲ್ಲಿ ತೆಲುಗಿನದ್ದು ಸಿಂಹಪಾಲು. ಸೋಮವಾರದ ಗಳಿಕೆಯಲ್ಲಿ ತೆಲುಗಿನಿಂದ ಶೇ. 48.75, ಹಿಂದಿಯಿಂದ ಶೇ. 28.03, ತಮಿಳಿನಿಂದ ಶೇ. 20.26 ಮತ್ತು ಮಲೆಯಾಳಂನಿಂದ ಶೇ. 16.32ರಷ್ಟು ಆದಾಯ ಹರಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಬಾಹುಬಲಿ ಕಲೆಕ್ಷನ್‌ಗೆ ಸಮೀಪ
ಜಾಗತಿಕವಾಗಿ ‘ಸಲಾರ್’ ಸದ್ಯ 625 ಕೋಟಿ ರೂ. ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೇಳಿದೆ. 2015ರಲ್ಲಿ ತೆರೆಕಂಡ ‘ಬಾಹುಬಲಿ 1’ ಚಿತ್ರ ವಿಶ್ವಾದ್ಯಂತ 650 ಕೋಟಿ ರೂ. ಗಳಿಸಿತ್ತು. ಈ ದಾಖಲೆಯನ್ನು ‘ಸಲಾರ್’ ಶೀಘ್ರದಲ್ಲಿಯೇ ಮುರಿಯುವ ಸಾಧ್ಯತೆ ಇದೆ. ಈ ಮಧ್ಯೆ ಕಾಲಿವುಡ್ ದಳಪತಿ ವಿಜಯ್ ಅಭಿನಯದ, ಕಳೆದ ವರ್ಷ ತೆರೆಕಂಡ ‘ಲಿಯೋ’ ಚಿತ್ರದ ಕಲೆಕ್ಷನ್ ಅನ್ನು ʼಸಲಾರ್ʼ ದಾಟಿದೆ. ʼಲಿಯೋʼ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 605 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಮೂಲಕ ʼಸಲಾರ್ʼ 2023ರಲ್ಲಿ ಅತೀ ಹೆಚ್ಚು ಗಳಿಸಿದ 5ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: Salaar Movie: ʻಸಲಾರ್ʼ ಸಿನಿಮಾದಲ್ಲಿ ಕನ್ನಡಿಗರದ್ದೇ ಹವಾ!
ʼಕೆಜಿಎಫ್ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಬಹುದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಇನ್ನೊಂದು ಗೆಲುವು ದಾಖಲಿಸಿದೆ. ʼಸಲಾರ್ 1′ ಈಗಾಗಲೇ ‘ಕೆಜಿಎಫ್ ಚಾಪ್ಟರ್ 1’, ‘ಪುಷ್ಪ 1’ ಮತ್ತು ‘ಬಾಹುಬಲಿ 1’ ಚಿತ್ರಗಳ ಕಲೆಕ್ಷನ್ ಮೀರಿದೆ. ʼಸಲಾರ್ 1ʼ ಚಿತ್ರದಲ್ಲಿ ಮಾಲಿವುಡ್ ಸೂಪರ್ ಸ್ಟಾರ್, ಬಹುಭಾಷಾ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಜತೆಗೆ ಇವರ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. 2017ರಲ್ಲಿ ತೆರೆಕಂಡ ಬಾಹುಬಲಿ 2 ಬಳಿಕ ಪ್ರಭಾಸ್ ಸತತ ಸೋಲಿಗೆ ತುತ್ತಾಗಿದ್ದರು. ಸಾಹೋ, ರಾಧೇ ಶ್ಯಾಮ್ ಮತ್ತು ಆದಿ ಪುರುಷ್ ಚಿತ್ರಗಳಿಗೆ ಪ್ರೇಕ್ಷಕರು ಗಮನ ಸೆಳೆಯುವಲ್ಲಿ ವಿಫಲವಾಗಿದ್ದವು. ಇದೀಗ ಕೊನೆಗೂ ಪ್ರಭಾಸ್ ಗೆಲುವಿನ ನಗೆ ಬೀರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ