Site icon Vistara News

Video: ಪತಿ-ಪತ್ನಿಯಂತೆ ನಿಂತು ಫೋಟೋಕ್ಕೆ ಪೋಸ್​ ಕೊಟ್ಟರಾ ಐಶ್ವರ್ಯಾ ರೈ-ಸಲ್ಮಾನ್ ಖಾನ್?​; ಐಶ್​ ಅಭಿಮಾನಿಗಳಿಗೆ ನೋವು

Salman Khan and Aishwarya Rai Bachchan edited Video Viral

#image_title

ಐಶ್ವರ್ಯಾ ರೈ ಮತ್ತು ಸಲ್ಮಾನ್​ ಖಾನ್​ ನಡುವಿನ (Salman Khan and Aishwarya Rai Bachchan) ಪ್ರೀತಿ-ಪ್ರೇಮದಿಂದ ಹಿಡಿದು ಬ್ರೇಕಪ್​ವರೆಗಿ ಕತೆ ಎಲ್ಲರಿಗೂ ಗೊತ್ತಿದೆ. 1999ರಲ್ಲಿ ತೆರೆಕಂಡ ಸಂಜಯ್​ ಲೀಲಾ ಬನ್ಸಾಲಿ ಅವರ ‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಸೆಟ್​​ನಿಂದ ಶುರುವಾದ ಅವರ ಪ್ರೀತಿ 2002ರಲ್ಲಿ ಕೊನೆಗೊಂಡಿತು. ಸಲ್ಮಾನ್​ ಖಾನ್​ ಜತೆಗಿನ ಸಂಬಂಧ ನನ್ನ ಜೀವನದಲ್ಲೇ ಅತ್ಯಂತ ಕೆಟ್ಟ ದಿನ. ನನ್ನ ವೈಯಕ್ತಿಕ ಸುರಕ್ಷತೆ, ನನ್ನ ಕುಟುಂಬದ ಒಳಿತಿಗಾಗಿ ಇನ್ನೆಂದೂ ಸಲ್ಮಾನ್ ಖಾನ್​ ಜತೆ ನಟಿಸುವುದಿಲ್ಲ ಎಂದು ಐಶ್ವರ್ಯಾ ರೈ 2002ರಲ್ಲಿಯೇ ಘೋಷಿಸಿಬಿಟ್ಟಿದ್ದಾರೆ. ಅದಾದ ಮೇಲೆ ಅವರೆಂದೂ ಸಲ್ಮಾನ್​ ಖಾನ್​ ಜತೆ ಕಾಣಿಸಿಕೊಳ್ಳಲಿಲ್ಲ. 2007ರಲ್ಲಿ ಅಭಿಷೇಕ್​ ಬಚ್ಚನ್​ರನ್ನು ವಿವಾಹವಾಗಿ, ಈ ಜೋಡಿಗೆ 2011ರಲ್ಲಿ ಮಗಳು ಆರಾಧ್ಯಾ ಹುಟ್ಟಿದ್ದಾಳೆ.

ಹೀಗೆ ಎರಡು ದಶಕಗಳ ಕಾಲ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿರುವ ಸಲ್ಮಾನ್ ಖಾನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಇತ್ತೀಚೆಗೆ ಮುಂಬಯಿಯ ಬಾಂದ್ರಾ ಕುರ್ಲಾದಲ್ಲಿರುವ ಜಿಯೊ ಸೆಂಟರ್​​ನಲ್ಲಿ ನೂತನವಾಗಿ ನಿರ್ಮಿಸಲಾದ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕಲಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದರು. ಇಲ್ಲಿ ಬಾಲಿವುಡ್​ ತಾರೆಗಳ ಸಮಾಗಮವೇ ನಡೆದುಹೋಗಿತ್ತು. ಐಶ್ವರ್ಯಾ ರೈ ಬಚ್ಚನ್​ ಕೂಡ ತನ್ನ ಮಗಳು, ಪತಿಯೊಂದಿಗೆ ಆಗಮಿಸಿದ್ದರೆ, ಸಲ್ಮಾನ್ ಖಾನ್​ ಸಹ ಇಲ್ಲಿಗೆ ಭೇಟಿಕೊಟ್ಟಿದ್ದರು. ಇಷ್ಟಾದರೂ ಇವರಿಬ್ಬರು ಪರಸ್ಪರ ಮಾತಾಡಿಕೊಂಡಿದ್ದಾಗಲಿ, ವಿಶ್ ಮಾಡಿಕೊಂಡಿದ್ದಾಗಲೀ ಇಲ್ಲ. ಆದರೆ ಅಲ್ಲಿ ಕ್ಲಿಕ್ಕಿಸಲಾದ ಕೆಲವು ಫೋಟೋಗಳಲ್ಲಿ ಇವರಿಬ್ಬರೂ ಇದ್ದಾರೆ. ಒಂದೇ ಫ್ರೇಮ್​​ನಲ್ಲಿ ಐಶ್ವರ್ಯಾ-ಸಲ್ಮಾನ್​ ಫೋಟೋ ಸಿಕ್ಕಿದೆ.

ಆದರೆ ಅದಾದ ಮೇಲೆ ವೈರಲ್ ಆಗುತ್ತಿರುವ ಎಡಿಟೆಡ್​ ವಿಡಿಯೊವೊಂದು ಐಶ್ವರ್ಯಾ ರೈ ಫ್ಯಾನ್ಸ್​ಗೆ ನೋವುಂಟು ಮಾಡಿದೆ. ಅದನ್ನು ನೋಡಿದ ಅನೇಕರು, ಎಡಿಟ್ ಮಾಡಿದವರಿಗೆ ಹಿಡಿಶಾಪ್ ಹಾಕುತ್ತಿದ್ದಾರೆ. ಅಂಬಾನಿ ಕಲಾ ಕೇಂದ್ರದಲ್ಲಿ ಪಾಲ್ಗೊಂಡಿದ್ದ ಇವರ ಪ್ರತ್ಯೇಕ ಫೋಟೋಗಳನ್ನು, ಕೊಲ್ಯಾಜ್​ ಮಾಡಿ ಚಿಕ್ಕ ವಿಡಿಯೊ ಮಾಡಲಾಗಿದೆ. ಐಶ್ವರ್ಯಾ ರೈ ಪಕ್ಕದಲ್ಲಿ ಮಗಳು ಆರಾಧ್ಯಾ ಇದ್ದರೆ, ಅವಳ ಪಕ್ಕದಲ್ಲಿ ಸಲ್ಮಾನ್ ಖಾನ್​ ಇರುವುದನ್ನು ವಿಡಿಯೊದಲ್ಲಿ ನೋಡಬಹುದು. ಹೀಗೆ ಸಲ್ಮಾನ್​ ಮತ್ತು ಐಶ್ವರ್ಯಾ ರೈರನ್ನು ಅಕ್ಕಪಕ್ಕದಲ್ಲಿ ನಿಲ್ಲಿಸಿ, ಕಪಲ್​ ಎಂಬಂತೆ ಬಿಂಬಿಸಿದ್ದು ಸರಿಯಲ್ಲ ಎಂದು ಐಶ್ವರ್ಯಾ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಇಂಥ ವಿಡಿಯೊಗಳನ್ನು ವೈರಲ್ ಮಾಡಬಾರದು. ಸೆಲೆಬ್ರಿಟಿಗಳೂ ಸೋಷಿಯಲ್ ಮೀಡಿಯಾ ಇರುತ್ತದೆ, ಅವರಿಗೂ ಕುಟುಂಬ-ಸಂಸಾರ ಇರುತ್ತದೆ. ಹೀಗೆಲ್ಲ ಮಾಡಿದರೆ ಅವರಿಗೂ ತೊಂದರೆಯಾಗುತ್ತದೆ ಎಂದು ಹೇಳುತ್ತಿದ್ದಾರೆ.

ಸಲ್ಮಾನ್ ಖಾನ್​ ಮತ್ತು ಐಶ್ವರ್ಯಾ ರೈ ಇಬ್ಬರೂ ರಿಲೇಶನ್​ಶಿಪ್​​ನಲ್ಲಿ ಇದ್ದಿದ್ದು ಸಲ್ಮಾನ್ ಕುಟುಂಬಕ್ಕೆ ಗೊತ್ತಾದಾಗ ಅವರು ತುಂಬ ಖುಷಿಪಟ್ಟಿದ್ದರು. ಆದರೆ ಐಶ್ವರ್ಯಾ ರೈ ಕುಟುಂಬಕ್ಕೆ ಸ್ವಲ್ಪವೂ ಇಷ್ಟ ಇರಲಿಲ್ಲ. ಅದರಲ್ಲೂ 2001 ನವೆಂಬರ್ ತಿಂಗಳಲ್ಲಿ ಒಂದು ರಾತ್ರಿ ಸಲ್ಮಾನ್ ಖಾನ್​ ಅವರು ಐಶ್ವರ್ಯಾ ರೈ ವಾಸವಿದ್ದ ಅಪಾರ್ಟ್​ಮೆಂಟ್​ಗೆ ಹೋಗಿ, ಗಲಾಟೆ ಸೃಷ್ಟಿಸಿದ್ದರು. ಇದು ಸುದ್ದಿಯಾದಾಗ ಐಶ್ವರ್ಯಾ ರೈ ಮತ್ತು ಅವರ ಕುಟುಂಬಕ್ಕೆ ಮುಜುಗರವಾಗಿತ್ತು. ಇನ್ನು ಸಲ್ಮಾನ್​ ತನ್ನ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾರೆ, ನಿಂದಿಸಿದ್ದಾರೆ ಎಂದು ಬ್ರೇಕಪ್ ಆದ ಸಮಯದಲ್ಲಿ ನಟಿ ಐಶ್ವರ್ಯಾ ರೈ ಹೇಳಿಕೊಂಡಿದ್ದರು. ಹೀಗಾಗಿ ಅವರಿಬ್ಬರ ಸಂಬಂಧ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳದಷ್ಟು ಅಸಹ್ಯವಾಗಿ ಹೋಗಿತ್ತು.

Exit mobile version