ಮುಂಬಯಿ: ಬಾಲಿವುಡ್ ತಾರೆ ಸಲ್ಮಾನ್ ಖಾನ್‌ಗೂ (Salman Khan) ಗಾಸಿಪ್‌ಗಳಿಗೂ ಬಿಟ್ಟೂಬಿಡದ ನಂಟು. ಅವರೆಲ್ಲೇ ಇರಲಿ, ಏನೇ ಮಾಡಲಿ, ಅಳಲಿ, ನಗಲಿ, ನಟಿಸಲಿ, ನಟಿಸದಿರಲಿ… ಎಲ್ಲದಕ್ಕೂ ಏನಾದರೊಂದು ಕಥೆ ಅವರ ಬೆನ್ನು ಬೀಳದಿದ್ದರೆ ಮತ್ತೆ ಕೇಳಿ! ಈಗಲೂ ಸಹ ʼಕಿಸೀಕಾ ಭಾಯ್ ಕಿಸೀಕಾ ಜಾನ್ʼ ಚಿತ್ರದ ಅವರ ಸಹನಟಿ, ಅರಳುಗಣ್ಣಿನ ಹುಡುಗಿ ಪೂಜಾ ಹೆಗ್ಡೆ ಜೊತೆಗೆ ಸಲ್ಮಾನ್ ಹೆಸರು ಓಡಾಡುತ್ತಿದೆ. ಅವರಿಬ್ಬರೂ ಒಟ್ಟಿಗೇ ಸಾಕಷ್ಟು ಸಮಯ ಕಳೆಯುತ್ತಿದ್ದಾರೆಯೇ ಎಂಬ ಬಗ್ಗೆ ಗುಸುಗುಸು ಕೇಳುತ್ತಿದೆ.
ಆದರೆ ಸಲ್ಮಾನ್ ಅವರ ಆಪ್ತರೊಬ್ಬರು ಇದನ್ನು ತಳ್ಳಿಹಾಕಿದ್ದು, “ಇಂಥ ಅಸಂಬದ್ಧ ಸುದ್ದಿಗಳನ್ನು ಹಬ್ಬಿಸುವವರಿಗೆ ಸ್ವಲ್ಪವಾದರೂ ಮರ್ಯಾದೆ ಇರಬೇಕಿತ್ತು. ಸಲ್ಮಾನ್ ಅವರ ಮಗಳ ವಯಸ್ಸಿನ ಹುಡುಗಿ ಆಕೆ. ಅವರಿಬ್ಬರೂ ಒಟ್ಟಿಗೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದಕ್ಕೆ ಯಾರೋ ಮೂರ್ಖರಿಗೆ ಈ ಮೂಲಕ ಚಿತ್ರಕ್ಕೆ ಒಳ್ಳೆಯ ಪ್ರಚಾರ ದೊರೆಯಬಹುದು ಎನಿಸಿರಬೇಕು. ಆದರೆ ಇದು ತೀರಾ ಮುಜುಗರದ ವಿಷಯ” ಎಂದು ಕಿಡಿಕಾರಿದ್ದಾರೆ.
ʻಕಭಿ ಈದ್ ಕಭಿ ದಿವಾಲಿʼ ಚಿತ್ರದಲ್ಲೂ ಸಲ್ಮಾನ್ ಜೊತೆಗೆ ಪೂಜಾ ನಟಿಸುತ್ತಿದ್ದು, ಸಲ್ಮಾನ್ ವ್ಯಕ್ತಿತ್ವದ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಈ ತಾರೆಯರ ತೆರೆಯ ಮೇಲಿನ ಕೆಮಿಸ್ಟ್ರಿ ಬಗ್ಗೆ ಸಿನಿ ಪ್ರಿಯರು ಈಗಾಗಲೇ ಕುತೂಹಲ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಚಿತ್ರೀಕರಣದ ಸೆಟ್‌ಗಳಲ್ಲಿ ಒಳ್ಳೆಯ ಸ್ನೇಹಿತರಂತೆ ಇದ್ದಾರೆ ಎನ್ನುತ್ತದೆ ಚಿತ್ರತಂಡ.
ಉಮೇರ್ ಸಂಧು ಎಂಬ ಸ್ವಘೋಷಿತ ಚಿತ್ರ ವಿಮರ್ಶಕನೊಬ್ಬ ಸುಮ್ಮನಿರಲಾರದೆ ಸಲ್ಮಾನ್ ಬಗ್ಗೆ ಇಂಥದ್ದೊಂದು ಗಾಸಿಪ್ ಸೃಷ್ಟಿಸಿದ್ದ. “ಬ್ರೇಕಿಂಗ್ ನ್ಯೂಸ್! ಮೆಗಾಸ್ಟಾರ್ ಸಲ್ಮಾನ್ ಖಾನ್‌ಗೆ ಪೂಜಾ ಹೆಗ್ಡಯೊಂದಿಗೆ ಪ್ರೇಮ! ಸಲ್ಮಾನ್ ಅವರ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಮುಂದಿನ ಎರಡು ಚಿತ್ರಗಳಿಗೂ ಪೂಜಾರನ್ನೇ ನಾಯಕಿಯನ್ನಾಗಿಸಿದೆ. ಸಲ್ಮಾನ್ ಆಪ್ತರಿಂದ ಈ ಮಾಹಿತಿ ದೊರೆತಿದೆ” ಎಂದೆಲ್ಲಾ ಸುದ್ದಿ ಹಬ್ಬಿಸಿದ್ದ. ಇದರಿಂದ ಕುಪಿತರಾದ ಅಂತರ್ಜಾಲಿಗರು “ಯಾರಪ್ಪಾ ನಿನಗಿಂಥ ಸುದ್ದಿ ಹೇಳಿದ ಸಲ್ಮಾನ್ ಆಪ್ತರು?” ಎಂದು ಪ್ರಶ್ನಿಸಿದ್ದರು. ಕೆಲವರಂತೂ ಅಗ್ಗದ ಪ್ರಚಾರಕ್ಕಾಗಿ ಇಂಥ ಕೆಲಸ ಮಾಡುತ್ತಿರುವುದಾಗಿ ನೇರವಾಗಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು