ಮುಂಬೈ: ಸದ್ಯ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅತೀ ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ತೆರೆಕಂಡ ʼಟೈಗರ್ 3ʼ (Tiger 3) ಚಿತ್ರ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿರಲಿಲ್ಲ. ಆ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಎನಿಸಿಕೊಂಡಿದೆ. ಅಲ್ಲದೆ ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಸದ್ದು ಮಾಡಿಲ್ಲ. ಹೀಗಾಗಿ ಅವರು ಇದೀಗ ಯಶಸ್ಸಿಗಾಗಿ ದಕ್ಷಿಣ ಭಾರತದ ನಿರ್ದೇಶಕರ ಮೊರೆ ಹೋಗಿದ್ದಾರೆ. ಹೌದು, ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರವನ್ನು ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ (A.R.Murugadoss) ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ತಮಿಳು ಮತ್ತು ಹಿಂದಿಯ ʼಘಜನಿʼ, ತಮಿಳಿನ ʼ7 ಆಮ್ ಅರಿವುʼ, ʼತುಪಾಕಿʼ, ʼಕತ್ತಿʼ, ʼದರ್ಬಾರ್ʼ, ಹಿಂದಿಯ ʼಹಾಲಿ ಡೇʼ, ತೆಲುಗಿನ ʼಸ್ಪೈಡರ್ʼ ಮುಂತಾದ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಮುರುಗದಾಸ್ ಸುಮಾರು 8 ವರ್ಷಗಳ ಬಳಿಕ ಸಲ್ಮಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಮತ್ತೆ ಕಾಲಿಡಲಿದ್ದಾರೆ. 2016ರಲ್ಲಿ ತೆರೆಕಂಡಿದ್ದ ಸೋನಾಕ್ಷಿ ಸಿನ್ಹಾ ನಟನೆಯ ʼಅಕಿರಾʼ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದ ಅವರು ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿರಲಿಲ್ಲ.
ಬಿಗ್ ಬಜೆಟ್ ಸಿನಿಮಾ
ಮೂಲಗಳ ಪ್ರಕಾರ ಮುರುಗದಾಸ್ ಮತ್ತು ಸಲ್ಮಾನ್ ಖಾನ್ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರ ದೊಡ್ಡ ಬಜೆಟ್‌ನಲ್ಲಿಯೇ ತಯಾರಾಗಲಿದೆ. ಅಂದಾಜು 400 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿಯೇ ಚಿತ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಈ ಚಿತ್ರವನ್ನು ತಯಾರಿಸಲಿದ್ದಾರೆ. ಮುಂದಿನ ವರ್ಷ ಚಿತ್ರ ಸೆಟ್ಟೇರಲಿದೆ ಎಂದು ಮೂಲಗಳು ತಿಳಿಸಿವೆ. ನಾಯಕಿ, ಉಳಿದ ಪಾತ್ರ ವರ್ಗ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
ಸದ್ಯ ಮುರುಗದಾಸ್ ಕಾಲಿವುಡ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಶಿವ ಕಾರ್ತಿಕೇಯನ್ ಅಭಿನಯದ ಮುಂದಿನ ಚಿತ್ರವನ್ನು ಮುರುಗದಾಸ್ ನಿರ್ದೇಶಿಸಲಿದ್ದು, ತಾತ್ಕಾಲಿಕವಾಗಿ ʼಎಸ್‌ಕೆ 23ʼ ಎನ್ನುವ ಶೀರ್ಷಿಕೆ ಇಡಲಾಗಿದೆ. ಮುಂದಿನ ತಿಂಗಳು ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಆ್ಯಕ್ಷನ್ ಎಂಟರ್‌ಟೈನರ್ ಆಗಿರುವ ಈದರಲ್ಲಿ ಶಿವ ಕಾರ್ತಿಕೇಯನ್ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಸೀತಾ ರಾಮಂʼ ಬೆಡಗಿ ಮೃಣಾಲ್ ಠಾಕೂರ್ ಸಿನಿಮಾದ ನಾಯಕಿ ಎನ್ನಲಾಗಿದ್ದು, ಈ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷ ಎಂದರೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಜತೆಗೆ ಬಾಲಿವುಡ್‌ನ ವಿದ್ಯುತ್ ಜಮ್ವಾಲ್ ಕೂಡ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಇದನ್ನೂ ಓದಿ: Deepika Padukone: BAFTA ಪ್ರಶಸ್ತಿ ಸಮಾರಂಭ ನಿರೂಪಿಸುವವರ ತಂಡದಲ್ಲಿರುವ ಏಕೈಕ ಭಾರತೀಯ ನಟಿ ಈಕೆ!
2020ರಲ್ಲಿ ತೆರೆಕಂಡ ರಜನಿಕಾಂತ್ ಅಭಿನಯದ ʼದರ್ಬಾರ್ʼ ಚಿತ್ರದ ಬಳಿಕ ಮುರುಗದಾಸ್ ನಿರ್ದೇಶನದ ಯಾವ ಸಿನಿಮಾವೂ ತೆರೆ ಕಂಡಿರಲಿಲ್ಲ. ನಟ ವಿಜಯ್ ಜತೆಗೆ ಮತ್ತೊಂದು ಚಿತ್ರ ಮಾಡುತ್ತಾರೆ ಎನ್ನಲಾಗಿತ್ತಾದರೂ ಅದು ಇನ್ನೂ ಸೆಟ್ಟೇರಿಲ್ಲ. ಹೀಗಾಗಿ ಶಿವ ಕಾರ್ತಿಕೇಯನ್ ಚಿತ್ರದ ಮೇಲೆ ಎಲ್ಲರ ನಿರೀಕ್ಷೆ ನೆಟ್ಟಿದೆ. ಅದಾದ ಬಳಿಕ ಅವರು ಬಾಲಿವುಡ್‌ಗೆ ಭರ್ಜರಿ ಕಮ್ ಬ್ಯಾಕ್ ಮಾಡಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ