ಮುಂಬಯಿ: ಇವತ್ತು ಸಲ್ಮಾನ್ ಖಾನ್ (salman Khan) ಎಂದರೆ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಪ್ರೀತಿಯ ದೊರೆ. ಕನಸಿನಲ್ಲೂ ಬರುವ ಲವರ್ ಬಾಯ್. ಪ್ರತಿ ಸಿನಿಮಾವನ್ನೂ ಹಿಟ್ ಮಾಡಿಸಬಲ್ಲ, ಒಂದೊಂದು ಸಿನಿಮಾಕ್ಕೂ ನೂರಾರು ಕೋಟಿ ರೂ. ಸಂಭಾವನೆ ಪಡೆಯುವ ಪವರ್‌ಫುಲ್ ಸ್ಟಾರ್. ಆದರೆ, ಇದೇ ಸಲ್ಮಾನ್ ಖಾನ್ ಮೊದಲ ಸಿನಿಮಾ ಮೈನೇ ಪ್ಯಾರ್ ಕಿಯಾ ಸೂಪರ್ ಹಿಟ್ ಆದ ಬಳಿಕವೂ ವೃತ್ತಿ ಬದುಕಿನಲ್ಲಿ ದೊಡ್ಡ ಸಂಕಷ್ಟಗಳನ್ನು ಎದುರಿಸಿದ್ದರು ಮಾತ್ರವಲ್ಲದೆ ಹಣವಿಲ್ಲದೆ ಒದ್ದಾಡಿದ್ದರು ಎಂದರೆ ನೀವು ನಂಬುತ್ತೀರಾ? ಆವತ್ತೊಂದು ದಿನ ಅಂಗಡಿಯಲ್ಲಿ ನಿಂತು ಶರ್ಟ್ ಒಂದನ್ನು ಆಸೆಗಣ್ಣುಗಳಿಂದ ನೋಡುತ್ತಾ, ಖರೀದಿಸಲು ಹಣವಿಲ್ಲದೆ ಬೇಜಾರಲ್ಲಿ ನಿಂತಿದ್ದಾಗ ಅವರ ಬಳಿ ಬಂದು ಏನೂ ಹೇಳದೆ ಅದೇ ಶರ್ಟ್‌ನ್ನು ಗಿಫ್ಟಾಗಿ ಕೊಟ್ಟಿದ್ದರು ಸುನಿಲ್ ಶೆಟ್ಟಿ. ಇಂಥಹುದೇ ಹಲವು ಎಂದೂ ಕೇಳದ ಕಥೆಗಳನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದು ಭಾನುವಾರ. ಅಬುಧಾಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (IIFA) ಪ್ರದಾನ ಸಮಾರಂಭದಲ್ಲಿ ಹಳೆ ನೆನಪಿಗೆ ಜಾರಿದ ಸಲ್ಮಾನ್ ವಸ್ತುಶಃ ಕಣ್ಣೀರಾದರು.
ಯಶಸ್ಸೆಲ್ಲ ಭಾಗ್ಯ ಶ್ರೀ ಪಾಲಾಯಿತು!
ಮೈನೆ ಪ್ಯಾರ್ ಕಿಯಾ ಸೂಪರ್ ಹಿಟ್ ಆಗಿದ್ದೇನೋ ನಿಜ. ಆದರೆ, ಅದರ ಯಶಸ್ಸೆಲ್ಲ ಸಿಕ್ಕಿದ್ದು ನಾಯಕಿಯಾಗಿದ್ದ ಭಾಗ್ಯಶ್ರೀಗೆ ಎಂದು ಹೇಳುತ್ತಾ ನಕ್ಕರು ಸಲ್ಮಾನ್ ಖಾನ್. ಸಿನಿಮಾದ ಯಶಸ್ಸಿನ ಬಳಿಕ ʻನಾನು ವೈವಾಹಿಕ ಬದುಕಿಗಾಗಿ ಚಿತ್ರರಂಗವನ್ನು ತೊರೆಯುತ್ತಿದ್ದೇನೆʼ ಎಂದು ಭಾಗ್ಯಶ್ರೀ ಘೋಷಿಸಿದ್ದರು. ಇದರಿಂದ ಎಲ್ಲರೂ ಭಾಗ್ಯ ಶ್ರೀ ಬಗ್ಗೆಯೇ ಮಾತನಾಡುವಂತಾಯಿತು. ನಾನು ಸೂಪರ್ ಹಿಟ್ ಚಿತ್ರ ನೀಡಿದರೂ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಯಿತು ಎಂದು ನೆನಪಿಸಿಕೊಳ್ಳುತ್ತಾ ಹನಿಗಣ್ಣಾದರು ಸಲ್ಮಾನ್.
1989ರಲ್ಲಿ ʻತೆರೆಕಂಡ ಮೈನೆ ಪ್ಯಾರ್ ಕಿಯಾʼ, ನಾಯಕವಾಗಿ ಸಲ್ಮಾನ್ (salman Khan) ಅವರ ಮೊದಲ ಚಿತ್ರವಾಗಿದ್ದರೆ ಭಾಗ್ಯಶ್ರೀ ಅವರ ಚೊಚ್ಚಲ ಚಿತ್ರವಾಗಿತ್ತು. ಸೂರಜ್ ಬರ್ಜಾತ್ಯ ಅವರ ನಿರ್ದೇಶನದ ಈ ಚಿತ್ರ ಗಳಿಕೆಯಲ್ಲಿ ಹೊಸ ದಾಖಲೆಯನ್ನೂ ಬರೆದಿತ್ತು. ಆದರೆ ಚಿತ್ರ ತೆರೆಕಂಡ ಸ್ವಲ್ಪ ಸಮಯದ ನಂತರ, ತಾವು ಹಿಮಾಲಯ್ ದಸಾನಿ ಅವರನ್ನು ವಿವಾಹವಾಗುವುದಕ್ಕಾಗಿ ಚಿತ್ರರಂಗವನ್ನು ತೊರೆಯುತ್ತಿರುವುದಾಗಿ ಭಾಗ್ಯಶ್ರೀ ಅವರು ಘೋಷಿಸಿದ್ದರು.
ದೇವರಂಥ ವ್ಯಕ್ತಿ ಬಂದರು
ʻʻʻಸುಮಾರು ಆರು ತಿಂಗಳ ಕಾಲ ಕೈಯಲ್ಲಿ ಕೆಲಸವಿಲ್ಲದೆ ಕುಳಿತಿದ್ದೆ. ನನ್ನ ಪರಿಸ್ಥಿತಿಯನ್ನು ನೋಡಲಾಗದ ತಂದೆಯವರು ನಿರ್ಮಾಪಕ ಜಿ.ಪಿ. ಸಿಪ್ಪಿ ಅವರಿಗೆ 2000 ರೂ. ಕೊಟ್ಟು ಸಲ್ಮಾನ್ ಖಾನ್‌ಗಾಗಿ ಒಂದು ಸಿನಿಮಾ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿಬಿಡಿ ಎಂದಿದ್ದರಂತೆ. ಜಿ.ಪಿ. ಸಿಪ್ಪಿ ಹಾಗೆ ಮಾಡಿದರು ಕೂಡಾ. ಆದರೆ, ಸಿನಿಮಾವೇ ಬರಲಿಲ್ಲ. ಇಂಥ ಹೊತ್ತಿನಲ್ಲಿ ದೇವರಂಥ ವ್ಯಕ್ತಿಯೊಬ್ಬರು ನನ್ನ ಜೀವನದಲ್ಲಿ ಬಂದರು. ಅವರೇ ರಮೇಶ್ ತುರಾನಿ. ಅದೊಂದು ದಿನ ರಮೇಶ್ ತುರಾನಿ ಅವರು ಜಿ.ಪಿ. ಸಿಪ್ಪಿ ಅವರ ಬಳಿಗೆ ಹೋಗಿ ಐದು ಲಕ್ಷ ರೂ. ಕೊಟ್ಟು, ಸಂಗೀತ ನಿರ್ದೇಶನ ಮಾಡಿ ಕೊಡಿ ಎಂದರು. ಹಾಗೆ 1991ರಲ್ಲಿ ಹುಟ್ಟಿಕೊಂಡಿದ್ದೇ ಪತ್ಥರ್ ಕೆ ಪೂಲ್. ತ್ಯಾಂಕ್ಯೂ ರಮೇಶ್ ತುರಾನಿʼʼ ಎಂದರು ಸಲ್ಮಾನ್ ಖಾನ್.
ಹಾಗೆಯೇ 2008ರಲ್ಲಿ ತಮ್ಮ ವೃತ್ತಿ ಜೀವನ ಕುಂಟುತ್ತಿದ್ದಾಗ, ʻವಾಂಟೆಡ್ʼ ಚಿತ್ರದ ಮೂಲದ ಜೀವ ತುಂಬಿದ್ದು ಬೋನಿ ಕಪೂರ್ ಎಂದು ಕಪೂರ್ ಅವರನ್ನು ಅಪ್ಪಿಕೊಂಡರು. ʻಬೋನಿ ಕಪೂರ್ ಅವರು ನನ್ನ ವೃತ್ತಿ ಜೀವನದುದ್ದಕ್ಕೂ ನನಗೆ ನೆರವಾಗಿದ್ದಾರೆʼ ಎಂದ ಖಾನ್, ʻ2005ರಲ್ಲೂ ʻನೋ ಎಂಟ್ರಿʼ ಮೂಲಕ ಅವಕಾಶದ ಬಾಗಿಲನ್ನು ತೆರೆದಿದ್ದರುʼ ಎಂದು ಹಳೆಯದ್ದನ್ನು ಮೆಲುಕು ಹಾಕಿದರು.
ಸುನಿಲ್ ಶೆಟ್ಟಿ ಶರ್ಟ್ ಕೊಡಿಸಿದ್ದು
ಸಲ್ಮಾನ್ ಖಾನ್ ಒಂದೊಂದು ಕಥೆ ಹೇಳುತ್ತಲೇ ಸ್ವಯಂ ಕಣ್ಣೀರಾದರು. ಅವರ ಜತೆಗೆ ಪ್ರೇಕ್ಷಕರೂ ಭಾವುಕರಾದರು. ಆದರೆ, ಎಲ್ಲರನ್ನೂ ಕಣ್ಣೀರು ಸುರಿಸುವಂತೆ ಮಾಡಿದ್ದು ಸಲ್ಮಾನ್ ಹೇಳಿದ ಸುನಿಲ್ ಶೆಟ್ಟಿ ಕಥೆ
ʻʻಆಗ ನನ್ನ ಬಳಿ ತುಂಬ ದುಡ್ಡಿರಲಿಲ್ಲ. ಒಂದು ಶರ್ಟ್ ಮತ್ತು ಜೀನ್ಸ್ ತೆಗೆದುಕೊಳ್ಳಲು ಮಾತ್ರ ಹಣವಿತ್ತು. ನಾನು ಒಂದು ಜನಪ್ರಿಯ ಅಂಗಡಿಗೆ ಹೋದೆ. ಆಗ ಒಂದು ಹೊಸ ಟ್ರೆಂಡ್‌ನ ಜೀನ್ಸ್ ಬಂದಿತ್ತು. ಅದುವೇ ಸ್ಟೋನ್ ವಾಷ್ಡ್ ಜೀನ್ಸ್. ನಾನು ತೆಗೆದುಕೊಂಡು ಹೋಗಿದ್ದ ಹಣ ಆ ಜೀನ್ಸ್ ಕೊಳ್ಳುವುದಕ್ಕೇ ಮುಗಿದು ಹೋಯಿತು. ಶರ್ಟ್‌ಗೆ ನನ್ನ ಬಳಿ ದುಡ್ಡಿರಲಿಲ್ಲ. ನಾನು ಶರ್ಟು ನೋಡುತ್ತಾ ನಿಂತಿದ್ದೆ. ಆಗ ಅದೇ ಶಾಪ್‌ಗೆ ಬಂದಿದ್ದ ಸುನಿಲ್ ಶೆಟ್ಟಿ ಅವರು ನನ್ನಲ್ಲಿ ಹಣವಿಲ್ಲದಿರುವುದನ್ನು ಗಮನಿಸಿ ತಾವೇ ನನಗೆ ಶರ್ಟು ಕೊಡಿಸಿದರು. ಆ ಕ್ಷಣವನ್ನು ಯಾವತ್ತೂ ಮರೆಯಲಾರೆ,ʼʼ ಎಂದು ಹೇಳಿದರು ಸಲ್ಮಾನ್.
ಇದೇ ಕಾರ್ಯಕ್ರಮದಲ್ಲಿ ಸುನಿಲ್ ಶೆಟ್ಟಿ ಅವರ ಪುತ್ರ ಆಹಾನ್ ಶೆಟ್ಟಿ ಇದ್ದರು. ಅವರು ಕೂಡಲೇ ವೇದಿಕೆಗೆ ಬಂದು ಸಲ್ಮಾನ್ ಖಾನ್ ಅವರನ್ನು ಬಿಗಿದಪ್ಪಿಕೊಂಡರು. ಕಥೆ ಇಷ್ಟಕ್ಕೇ ಮುಗಿದಿಲ್ಲ. ʻʻನಾನು ಅಲ್ಲೊಂದು ಚಂದದ ಪರ್ಸ್ ಇರುವುದನ್ನು ನೋಡಿದ್ದೆ. ನಾನು ಅದನ್ನೇ ನೋಡುತ್ತಿದ್ದುದನ್ನು ಸುನಿಲ್ ಶೆಟ್ಟಿ ಅವರು ಎಲ್ಲಿಂದಲೋ ಗಮನಿಸಿದ್ದರು ಅನಿಸುತ್ತದೆ. ಅವರು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ತಮ್ಮ ಬಳಿ ಇದ್ದ ಹೆಚ್ಚುವರಿ ಪರ್ಸ್‌ನ್ನು ನನಗೆ ನೀಡಿದರುʼ ಎಂದು ಸಲ್ಮಾನ್ ನೆನಪಿಸಿಕೊಂಡರು.
ಇದನ್ನೂ ಓದಿ: Jawan Teaser: ಲಿಯಾಮ್ ನೀಸನ್ ಅವರ 1990ರ ಚಿತ್ರ ಡಾರ್ಕ್‌ಮ್ಯಾನ್ ಕಾಪಿ ಮಾಡಿದ್ರಾ SRK?