ಮುಂಬಯಿ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸೋಮವಾರ (ಡಿಸೆಂಬರ್ 27) ತಮ್ಮ 57ನೇ ಜನುಮದಿನ ಆಚರಣೆ ಮಾಡಿದ್ದಾರೆ. ಮುಂಬಯಿಯಲ್ಲಿ ಅವರು ದೊಡ್ಡ ಪಾರ್ಟಿ ಆಯೋಜಿಸಿದ್ದು, ಶಾರುಖ್ ಖಾನ್, ನಟಿ ಪೂಜಾ ಹೆಗ್ಡೆ ಸೇರಿದಂತೆ ಸೆಲೆಬ್ರಿಟಿಗಳ ದಂಡು ಸಂಭ್ರಮದಲ್ಲಿ ಪಾಲ್ಗೊಂಡಿತ್ತು. ಇವೆಲ್ಲದರ ಮಧ್ಯೆ ಗಮನ ಸೆಳೆದಿದ್ದು ಸಲ್ಮಾನ್ ಅವರ ಮಾಜಿ ಪ್ರಿಯತಮೆ ಸಂಗೀತಾ ಬಿಜಲಾನಿ. ತಮ್ಮ ಹುಟ್ಟಿದ ದಿನದ ಸಂಭ್ರಮಾಚರಣೆಗೆ ಆಗಮಿಸಿದ್ದ ಸಂಗೀತಾ ಅವರ ಹಣೆಗೆ ಮುತ್ತಿಟ್ಟು ಸ್ವಾಗತಿಸಿದ್ದಾರೆ ಸಲ್ಲು ಭಾಯ್. ಹೆಗಲ ಮೇಲೆ ಕೈ ಇಟ್ಟುಕೊಂಡು ನಿಂತಿದ್ದ ಅವರು ತಮ್ಮಿಬ್ಬರ ಪ್ರೇಮದ ದಿನಗಳನ್ನು ನೆನಪಿಸಿಕೊಂಡರು.
ಸಲ್ಮಾನ್ ಖಾನ್ ಮತ್ತು ಸಂಗೀತ ಬಿಜಲಾನಿ 90ರ ದಶಕದಲ್ಲಿ 10 ವರ್ಷಕ್ಕೂ ಅಧಿಕ ಕಾಲ ಡೇಟಿಂಗ್ನಲ್ಲಿ ಇದ್ದರು. ಬಳಿಕ ಅವರು ಬೇರ್ಪಟ್ಟಿದ್ದರು. ಕ್ರಿಕೆಟರ್ ಹಾಗೂ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಸಂಗೀತಾ ಮದುವೆಯಾಗಿದ್ದರು. 2010ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ.
ದಶಕಕ್ಕೂ ಅಧಿಕ ಕಾಲ ಪ್ರೀತಿಸಿದ್ದ ಸಲ್ಮಾನ್ ಹಾಗೂ ಸಂಗೀತಾ ತಮ್ಮ ಪ್ರೀತಿ ಮುರಿದು ಹೋದ ಬಳಿಕವೂ ಸ್ನೇಹ ಮುಂದುವರಿಸಿದ್ದರು. ಹೀಗಾಗಿ 57ನೇ ವರ್ಷದ ಬರ್ತ್ಡೇ ಸಂಭ್ರಮಕ್ಕೆ ಅವರು ಆಗಮಿಸಿ ಸಲ್ಮಾನ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರಿಬ್ಬರು ಜತೆಯಾಗಿ ನಿಂತು ಮಾತನಾಡುವ ಹಾಗೂ ಮುತ್ತಿಡುವ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಸಲ್ಲು ಅಭಿಮಾನಿಗಳಿಗಂತೂ ಇದರಿಂದ ಸಕ್ಕರೆ ತಿಂದಷ್ಟು ಖುಷಿಯಾಗಿದೆ.
ಸಲ್ಮಾನ್ ಬರ್ತ್ ಪಾರ್ಟಿಯಲ್ಲಿ ಪೂಜಾ ಹೆಗ್ಡೆ, ಯುಲಿಯಾ ವಂತೂರ್, ತಬು, ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್, ಕಾರ್ತಿಕ್ ಆರ್ಯನ್, ಸಿದ್ಧಾಂತ್ ಚತುರ್ವೇದಿ, ಸೋನಾಕ್ಷಿ ಸಿನ್ಹಾ, ಸುನೀಲ್ ಶೆಟ್ಟಿ ಮತ್ತು ಜಹೀರ್ ಇಕ್ಬಾಲ್ ಮತ್ತಿತರು ಪಾಲ್ಗೊಂಡಿದ್ದರು. ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಅವರ ಪತಿ ಆಯುಶ್ ಶರ್ಮಾ, ಸಹೋದರ ಅರ್ಬಾಜ್ ಮತ್ತು ಸೊಹೈಲ್ ಮತ್ತು ಸೋದರಳಿಯ ಅರ್ಹಾನ್ ಖಾನ್ ಅವರೂ ಜತೆಗಿದ್ದರು.
ಸಲ್ಮಾನ್ ಖಾನ್ ಹೊಸ ಸಿನಿಮಾವೊಂದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ತೆರೆಗೆ ಬರಲಿದ್ದು, ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿಜೇಂದರ್ ಸಿಂಗ್ ಇದರಲ್ಲಿ ಪಾತ್ರ ವಹಿಸಲಿದ್ದಾರೆ. ಅದೇ ರೀತಿ ಸಲ್ಮಾನ್ ಅವರು ಬಿಗ್ ಬಾಸ್ 16 ಟಿವಿ ರಿಯಾಲಿಟಿ ಶೋದಲ್ಲೂ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ | Salman Khan | 57ನೇ ಜನುಮದಿನದ ಸಂಭ್ರಮದಲ್ಲಿರುವ ಭಾಯ್ ಜಾನ್ ʼಸಲ್ಮಾನ್ ಖಾನ್ʼ