Site icon Vistara News

Samantha | ಮೈಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ; ನಟಿಯ ಪತ್ರದಲ್ಲೇನಿದೆ?

Samantha

ಬೆಂಗಳೂರು: ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ (Samantha) ತಮಗೆ ಇರುವ ಕಾಯಿಲೆ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ. ಈ ರೋಗದ ವಿರುದ್ಧ ಹೋರಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲಿಯೇ ಗುಣಮುಖರಾಗುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ಸಮಂತಾ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಸಮಂತಾ ತಮ್ಮ ಆರೋಗ್ಯದ ಸಮಸ್ಯೆ ಕುರಿತು ಹೇಳಿಕೊಂಡಿದ್ದರು. ಇದೀಗ ತಮ್ಮ ಕಾಯಿಲೆ ಕುರಿತು ಪತ್ರವೊಂದನ್ನು ಬರೆದು ನೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳೂ ಸ್ಪಂದಿಸಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಈಗಾಗಲೇ ೮ ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿದ್ದು, ಬೇಗ ಗುಣಮುಖರಾಗಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಿ ಎಂದೂ ಪ್ರಾರ್ಥಿಸಿದ್ದಾರೆ.

ಪತ್ರದಲ್ಲೇನಿದೆ?
ನನ್ನ ನಟನೆಯ ʻʻಯಶೋಧಾ” ಟ್ರೈಲರ್‌ ಬಗ್ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ನನ್ನ ಮತ್ತು ನಿಮ್ಮ ನಡುವಿನ ಪ್ರೀತಿ, ಹಂಚಿಕೊಳ್ಳುವ ಭಾವನೆಗಳು ಹಾಗೂ ನೀವು ನನಗೆ ಕೊಡುವ ವಿಶ್ವಾಸವು ನನ್ನ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ನನಗೆ ಮೈಯೋಸೈಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆ ಇದೆ ಎಂಬುದು ಕೆಲವು ತಿಂಗಳ ಹಿಂದಷ್ಟೇ ನನಗೆ ತಿಳಿಯಿತು. ಇದರಿಂದ ಹೊರಬಂದ ಬಳಿಕ ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳೋಣ ಅಂದುಕೊಂಡಿದ್ದೆ. ಆದರೆ, ನಾನು ಅಂದುಕೊಂಡಷ್ಟು ಸುಲಭವಾಗಿ ಈ ಕಾಯಿಲೆ ಗುಣವಾಗುತ್ತಿಲ್ಲ. ಆರೋಗ್ಯ ಸರಿಹೊಂದುವುದು ವಿಳಂಬವಾಗುತ್ತಿದೆ. ಈ ಕಾಯಿಲೆ ವಿರುದ್ಧ ನಾನು ಇನ್ನೂ ಹೋರಾಡುತ್ತಿದ್ದೇನೆ. ಆದರೆ, ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಾನು ಒಳ್ಳೆಯ ಹಾಗೂ ಕೆಟ್ಟ ದಿನಗಳನ್ನು ಕಂಡಿದ್ದೇನೆ. ನನಗೆ ಆ ಒಂದು ಸಮಯ ತುಂಬಾ ಕಾಡಿದ್ದು ಸುಳ್ಳಲ್ಲ. ಇದನ್ನು ನನ್ನಿಂದ ಇನ್ನೊಂದು ಕ್ಷಣವೂ ಸಹಿಸಲು ಆಗದು ಎಂದೂ ಅನ್ನಿಸಿತ್ತು. ಆದರೆ ಆ ಕೆಟ್ಟ ಘಳಿಗೆ ಈಗಿಲ್ಲ. ನಾನು ಸುಧಾರಿಸಿಕೊಳ್ಳುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Samantha | ಪ್ರೀತಿಯ ಹುಡುಕಾಟದಲ್ಲಿದ್ದಾರಂತೆ ಸಮಂತಾ: ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ರಾ?

ಮೈಯೋಸೈಟಿಸ್ ಕಾಯಿಲೆ ಲಕ್ಷಣ ಏನು?
ಈ ಕಾಯಿಲೆಯಿಂದ ನಿಲ್ಲಲು ತೊಂದರೆ ಆಗುತ್ತದೆ. ನಿಂತರೆ ಸುಸ್ತೆನಿಸಿಬಿಡುತ್ತದೆ. ಕುಳಿತು ಏಳಲು ಬಹಳ ಸಂಕಟ ಪಡಬೇಕಾಗುತ್ತದೆ. ಕೈಗಳನ್ನು ಮೇಲೆತ್ತಲು ಸಹ ಬಹಳ ಕಷ್ಟಪಡಬೇಕಾಗುತ್ತದೆ. ಏನನ್ನಾದರೂ ನುಂಗಬೇಕೆಂದರೆ ಅದೂ ಕಷ್ಟವಾಗುತ್ತದೆ. ಉಸಿರಾಡುವುದೂ ಕಷ್ಟವಾಗುತ್ತದೆ. ಕೆಲವು ವಾರಗಳ ವರೆಗೆ ಮೈ-ಕೈ ನೋವು ಇರುತ್ತದೆ. ಆದರೆ, ಸಮಂತಾ ಅವರಿಗೆ ಯಾವ ರೀತಿಯ ಮೈಯೋಸೈಟಿಸ್ ಕಾಯಿಲೆ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದೇ ನವೆಂಬರ್‌ 11ಕ್ಕೆ ಯಶೋಧಾ ತೆರೆಗೆ!
ಸಮಂತಾ ನಟನೆಯ ‘ಯಶೋಧಾ’ ಸಿನಿಮಾದ ಟ್ರೈಲರ್ ಎರಡು ದಿನದ ಹಿಂದೆ ಬಿಡುಗಡೆ ಆಗಿದ್ದು, ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಬಾಡಿಗೆ ತಾಯಿಯ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ನವೆಂಬರ್ 11ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಯಶೋಧಾ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ, ಪ್ರಿಯಾಂಕಾ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮಣಿಶರ್ಮ ಹಿನ್ನೆಲೆ ಸಂಗೀತವಿದ್ದು, ಎಂ. ಸುಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ. ತೆಲುಗು ಚಿತ್ರದ ಅವತರಣಿಕೆಯು ಸೆನ್ಸಾರ್ ಆಗಿತ್ತು. ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಸಮಂತಾ
ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಚಿತ್ರೀಕರಣ ಮುಗಿದಿದೆ. ನಟ ವಿಜಯ್ ದೇವರಕೊಂಡ ಜತೆಗೆ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅರೇಂಜ್‌ಮೆಂಟ್ಸ್ ಆಫ್ ಲವ್’ ಹಾಲಿವುಡ್‌ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.

ಇದನ್ನೂ ಓದಿ | Samantha | ಸಮಂತಾ ನಟನೆಯ ʻಯಶೋದಾʼ ಟ್ರೈಲರ್‌ ಬಿಡುಗಡೆಗೊಳಿಸಿದ ನಟ ರಕ್ಷಿತ್‌ ಶೆಟ್ಟಿ!

Exit mobile version