ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಅವರ ಮುಂಬರುವ ಪೌರಾಣಿಕ ಚಿತ್ರ ಶಾಕುಂತಲಂ (Shaakuntalam) ಏಪ್ರಿಲ್ 14 ರಂದು ತೆರೆ ಕಾಣುತ್ತಿದೆ. ಸ್ಯಾಮ್ ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಟಿ ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಸಮಂತಾ ಮಾತನಾಡಿ ʻʻನಾನು ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ ಸಮಯದಲ್ಲಿ ನನಗೆ ಈ ಆಫರ್ ಬಂದಿತು. ನಾನು ಆಗಷ್ಟೇ ಶಾಕುಂತಲೆಗಿಂತ ವಿಭಿನ್ನವಾದ ರಾಜಿ ಪಾತ್ರವನ್ನು ನಿರ್ವಹಿಸಿದ್ದೆ. ಶಾಕುಂತಲೆ ಪಾತ್ರ ಪಾವಿತ್ರ್ಯತೆ, ಮುಗ್ಧತೆ ಮತ್ತು ಘನತೆಯ ಸಂಕೇತವಾಗಿದೆ. ಆ ಸಮಯದಲ್ಲಿ ನಾನು ಶಾಕುಂತಲೆ ಆಗಿ ಬದಲಾಗಬಹುದೇ ಎಂದು ನನಗೆ ಖಚಿತ ಇರಲಿಲ್ಲʼʼಬಎಂದು ಸಮಂತಾ ಹೇಳಿದ್ದಾರೆ.
ʻಬಳಿಕ ನಾನು ಶಾಕುಂತಲೆ ಪಾತ್ರ ನನಗೊಂದು ಅವಕಾಶ ಎಂದು ಸಹಿ ಹಾಕಿದೆ. ಕಳೆದ 3 ವರ್ಷಗಳಲ್ಲಿ, ನಾನು ತುಂಬ ಭಯದಿಂದ ಬದುಕಿದ್ದೇನೆ. ಶಾಕುಂತಲೆ ಕೂಡ ತುಂಬ ಕಷ್ಟಗಳನ್ನು ಎದುರಿಸಿದ್ದಳು. ಆದರೆ ಅವಳು ಎಲ್ಲವನ್ನೂ ಘನತೆಯಿಂದ ಎದುರಿಸಿದಳು. ನನ್ನ ಭಯವನ್ನು ಎದುರಿಸಲು ನಾನು ಈ ಸಿನಿಮಾ ತೆಗೆದುಕೊಂಡೆ. ಕಳೆದ ಮೂರು ವರ್ಷಗಳಲ್ಲಿ ನನ್ನ ಭಯವನ್ನು ನಾನು ಹೇಗೆ ಎದುರಿಸಿದೆ ಎಂಬುದು ನಟಿಯಾಗಿ ನನ್ನ ವಿಕಾಸವನ್ನು ವಿವರಿಸುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: Samantha: ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾದಲ್ಲಿ ನಟ ಜಿಶು ಸೇನಗುಪ್ತಾ ಪಾತ್ರವೇನು?
ಏಪ್ರಿಲ್ 14 ರಂದು ತೆರೆಗೆ
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.