ಬೆಂಗಳೂರು: ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾಪ್ರಧಾನ ಚಿತ್ರ “ಕ್ರೀಂ” ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ (Samyuktha Hegde) ವೇಶ್ಯೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಸಿನಿಮಾದಲ್ಲಿ ಅಚ್ಯುತಕುಮಾರ್, ಅರುಣಸಾಗರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿ.ಕೆ. ದೇವೇಂದ್ರ ನಿರ್ಮಾಣ ಮಾಡಿದ್ದಾರೆ.
ಅಭಿಷೇಕ್ ಬಸಂತ್ ಸಿನಿಮಾ ಕುರಿತು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ʻʻಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ನಮ್ಮ ಚಿತ್ರಕ್ಕೆ ಸಂಯುಕ್ತ ಹೆಗಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದʼʼಎಂದು ಮಾಹಿತಿ ಹಂಚಿಕೊಂಡರು.
ಸಂಯುಕ್ತ ಹೆಗ್ಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್.
ಇದನ್ನೂ ಓದಿ: ಫೈಟಿಂಗ್ ದೃಶ್ಯ ಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗ್ಡೆಗೆ ಗಾಯ
ತಮ್ಮ ಪಾತ್ರದ ಕುರಿತು ಮಾತನಾಡಿರುವ ಸಂಯುಕ್ತಾ ʻನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಂಥದ್ದೊಂದು ಪಾತ್ರವನ್ನು ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಟೀಮ್ ಕೊಟ್ಟ ಸಹಕಾರ ದೊಡ್ಡದು. ಶ್ರೀಧರ್ ಅಂತವರು ಇದ್ದರೆ ಎಂತಹ ಪಾತ್ರ ಮಾಡುವುದಕ್ಕೂ ಧೈರ್ಯ ಬರುತ್ತದೆ ಎಂದರು.