Site icon Vistara News

Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸ್ಯಾಂಡಲ್‌ವುಡ್‌ ಹಿರಿಯ ತಾರೆಯರು

Sandalwood senior stars inquired about health Actress Leelavathi

ಬೆಂಗಳೂರು: ಕನ್ನಡದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ (Actress Leelavathi) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದೀಗ ನಟಿಯನ್ನು ನಟ ಶ್ರೀನಾಥ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಪದ್ಮಾ ವಾಸಂತಿ, ಶಶಿಕಲಾ ಅವರು ಭೇಟಿ ಮಾಡಿ ನಟಿಯ ಕ್ಷೇಮ ವಿಚಾರಿಸಿದ್ದಾರೆ.

ಈ ಹಿಂದೆ ಅಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್‌ ನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಕ್ಷೇಮ ವಿಚಾರಿಸಿದ್ದರು.

600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಳಂ ಭಾಷೆಗಳಲ್ಲಿ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ 1999-2000 ಸಾಲಿನಲ್ಲಿ ಕರ್ನಾಟಕ ಚಲನಚಿತ್ರರಂಗದ ಜೀವಮಾನದ ಸಾಧನೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ.ರಾಜ್‌ಕುಮಾರ್‌ ಪ್ರಶಸ್ತಿ ನೀಡಲಾಗಿತ್ತು. 20008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ನೀಡಲಾಗಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಇವರು ನಾಟಕ ಮತ್ತು ರಂಗಭೂಮಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಅವರ ಮಗ ವಿನೋದ್‌ ರಾಜ್‌ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟ. 1949ರಲ್ಲಿ ಶಂಕರ್‌ಸಿಂಗ್‌ ಅವರ ʻನಾಗಕನ್ನಿಕೆʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ʻಮಾಂಗಲ್ಯ ಯೋಗʼ ಸಿನಿಮಾ ಮೂಲಕ ಡಾ. ರಾಜ್‌ಕುಮಾರ್‌ ಅವರೊಂದಿಗೆ ನಟಿಸಿದ ಮೊದಲ ಚಿತ್ರವಾಗಿತ್ತು. ಹಾಗೂ ಈ ಚಿತ್ರದ ಮೂಲಕ ಮೊದಲಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

ʻಗೆಜ್ಜೆ ಪೂಜೆʼ, ʻಬಿಳಿ ಹೆಂಡ್ತಿʼ, ʻನಾಗರಹಾವುʼ, ʻನಾ ನಿನ್ನ ಮರೆಯಲಾರೆʼ, ʻಕನ್ನಡದ ಕಂದʼ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು.

Exit mobile version