ʻಬೆಂಗಳೂರು : ಪುನೀತ್ ಅಭಿನಯದ ʻಗಂಧದ ಗುಡಿʼ ಸಿನಿಮಾ (Gandhada Gudi) ಅಕ್ಟೋಬರ್ 28ರಂದು ಬಿಡುಗಡೆಗೊಂಡಿದೆ. ಸಿನಿಮಾ ವೀಕ್ಷಿಸಿದ ಬಳಿಕ ನಟ ನಟಿಯರು ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಕುರಿತು ಮಾತನಾಡಿ ʻʻಅಪ್ಪು ಅವರು ಲೈಫ್ ಜರ್ನಿಯಲ್ಲಿ ಏನೇನು ತಿಳಿದುಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆʼʼ ಎಂದರು. ನಟ ರಕ್ಷಿತ್ ಶೆಟ್ಟಿ ಮಾತನಾಡಿ ʻʻಸಿನಿಮಾ ಹಂತ ಹಂತವಾಗಿ ನೋಡುವಾಗ ಅಪ್ಪು ಜತೆಗೆ ಇದ್ದ ಅನುಭವ ಆಗುತ್ತದೆ. ಪ್ರಕೃತಿಗೋಸ್ಕರ ನಾವು ಏನಾದರೂ ಮಾಡಬೇಕು ಎನ್ನುವ ಮೆಸೇಜ್ ನೀಡಿದ್ದಾರೆʼʼಎಂದರು.
ಸ್ಯಾಂಡಲ್‌ವುಡ್ ನಟಿ ರಮ್ಯಾ ಮಾತನಾಡಿ ʻʻಈ ಸಿನಿಮಾ ಪ್ರಕೃತಿ ಪಾಠವನ್ನು ಒಳಗೊಂಡಿದೆ. ಮಕ್ಕಳಿಂದ ಹಿಡಿದು ಎಲ್ಲರೂ ಈ ಸಿನಿಮಾ ನೋಡಲೇಬೇಕು. ತುಂಬ ಸರಳವಾಗಿ ಮುಖ್ಯವಾದ ಮಾತುಗಳನ್ನು ಹೇಳಿದ್ದಾರೆ. ಗಂಧದ ಗುಡಿ ನೋಡಿದಾಗ ಅಪ್ಪು ಯಾರು ಎಂಬುದು ತಿಳಿಯುತ್ತದೆʼʼ ಎಂದು ತಿಳಿಸಿದರು.
ಇದನ್ನೂ ಓದಿ | Gandhada Gudi | ಗಂಧದ ಗುಡಿ ಇದೊಂದು ಹಬ್ಬ: ಶುಭ ಹಾರೈಸಿದ ಕಿಚ್ಚ ಸುದೀಪ್!
ಆ್ಯಂಕರ್ ಅನುಶ್ರೀ ಚಿತ್ರದ ಬಗ್ಗೆ ಮಾತನಾಡಿ ʻʻನಮ್ಮಲ್ಲಿರುವ ಮಾನವೀಯತೆಯನ್ನು ಅಪ್ಪು ಸರ್ ಬಡಿದು ಎಬ್ಬಿಸಿದ್ದಾರೆ. ಅಪ್ಪು ಅವರು ಹೇಗೆ ಅವರು ಅಪ್ಪಾಜಿ ಅವರು ನಡೆದ ದಾರಿಯಲ್ಲಿ ಹೋಗಿದ್ದೇನೆ ಎಂದು ಅನ್ನಿಸಿತ್ತೋ ಅದೇ ರೀತಿ ನಾವು ಅವರ ದಾರಿಯಲ್ಲಿ ಹೋಗಬೇಕು ಎಂದೆನಿಸಿತು. ಗಿಡ ನೆಡಬೇಕು, ವಾಯುಮಾಲಿನ್ಯ ಮಾಡಬಾರದು ಎಂದೆನಿಸಿತುʼʼಎಂದರು.
ನಟ ಶ್ರೀಮುರಳಿ ಮಾತನಾಡಿ ʻʻಅಪ್ಪು ಮಾಮ ತೆರೆ ಮೇಲೆ ತುಂಬ ಚೆಂದವಾಗಿ ಕಂಡರು. ಅಪ್ಪು ಅವರ ಕೊನೆಯ ಸಿನಿಮಾ ಎಂದು ಹೇಳಲು ಬೇಸರವಾಗುತ್ತದೆ. ಅದ್ಭುತವಾದ ವಿಷಯಗಳನ್ನು, ನೆನಪುಗಳನ್ನು ಕೊಟ್ಟಿದ್ದಾರೆʼʼ ಎಂದು ಹೇಳಿದರು.
ನೆನಪಿರಲಿ ಪ್ರೇಮ್ ಮಾತನಾಡಿ ʻʻಸಿನಿಮಾ ಅವರ ಪಕ್ಕದಲ್ಲೇ ನಿಂತು ಕಾಡನ್ನು ನೋಡಿದ ಅನುಭವ ಆಯ್ತು. ನಮ್ಮನ್ನು ನಗಿಸಿದ್ದಾರೆ. ವಿಶ್ವಮಾನವನಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳಿಗೆ ಈ ಸಿನಿಮಾ ತೋರಿಸಿʼʼ ಎಂದು ಸಲಹೆ ನೀಡಿದರು.
ಇದನ್ನೂ ಓದಿ | Gandhada Gudi | ಚಿತ್ರಮಂದಿರಗಳಲ್ಲಿ ನೂಕು ನುಗ್ಗಲು: ಅಪ್ಪು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದ ಫ್ಯಾನ್ಸ್!