ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (70th National Film Awards) ಘೋಷಣೆಯಾಗಿವೆ. ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಗಳ ಪೈಕಿ ‘ಅತ್ಯುತ್ತಮ ಕನ್ನಡ ಸಿನಿಮಾ’ ಪ್ರಶಸ್ತಿ ‘ಕೆಜಿಎಫ್ ಚಾಪ್ಟರ್ 2’ ಪಾಲಾಗಿದೆ. ‘ಕೆಜಿಎಫ್ ಚಾಪ್ಟರ್ 2’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ನಿರ್ದೇಶಕ ಪ್ರಶಾಂತ್ ನೀಲ್. ಚಿತ್ರವನ್ನ ನಿರ್ಮಿಸಿದವರು ಹೊಂಬಾಳೆ ಫಿಲ್ಮ್ಸ್. ನಾನ್ ಫೀಚರ್ ವಿಭಾಗದಲ್ಲಿ ‘ಮಧ್ಯಂತರ’ ಕಿರುಚಿತ್ರ ಬಹುವಾಗಿ ಗಮನ ಸೆಳೆದಿದೆ. ಪ್ರಶಸ್ತಿ ಘೋಷಿಸಿದ ಜ್ಯೂರಿಗಳು ಸಹ ‘ಮಧ್ಯಂತರ’ ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ. ಈ ಸಿನಿಮಾ ವಿಶೇಷತೆ ಏನು ತಿಳಿಯಲು ಮುಂದೆ ಓದಿ..
ಮಧ್ಯಂತರ ಕಿರು ಚಿತ್ರ
ಇದು ಸಿನಿಮಾ ಪ್ರೇಮಿಗಳಿಬ್ಬರ ಕಥೆ. ಬಂಟ್ವಾಳದ ದಿನೇಶ್ ಅವರು ಸ್ವತಃ ಸಿನಿಮಾ ಪ್ರಿಯರು. 27 ವರ್ಷಗಳಿಂದಲೂ ಅವರು ಮನೊರಂಜನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.2022ರ ಮಾರ್ಚ್ ತಿಂಗಳಲ್ಲಿ ‘ಮಧ್ಯಂತರ’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದರು ದಿನೇಶ್ ಶೆಣೈ.ಸಿನಿಮಾದ ನಿರೂಪಣೆ ತಮಾಷೆಯ ಧಾಟಿಯಲ್ಲಿದ್ದರೂ ಗಂಭೀರವಾದ ವಸ್ತು ವಿಷಯ ಒಳಗೊಂಡಿದೆ. ಮುಖ್ಯ ಪಾತ್ರದಲ್ಲಿ ದಾವಣಗೆರೆಯ ವೀರೇಶ್ ಹಾಗೂ ರಂಗಭೂಮಿ ಹಿನ್ನೆಲೆಯ ಅಜಯ್ ನೀನಾಸಂ ನಟಿಸಿದ್ದಾರೆ.
ಹೋಟೆಲ್ ಸಪ್ಲೈಯರ್ಗಳಾಗಿ ಕೆಲಸ ಮಾಡುವ ಇಬ್ಬರಿಗೆ ಸಿನಿಮಾ ಅಂದರೆ ಪಂಚ ಪ್ರಾಣ. ಡಾ ರಾಜ್ಕುಮಾರ್ ಇವರ ಬಲು ಮೆಚ್ಚಿನ ನಟ. ಸಿನಿಮಾ ನೋಡಿ ಬಂದು ಅದನ್ನು ಗೆಳೆಯರ ಬಳಿ ಹೇಳುವುದು ಇವರ ಮೆಚ್ಚಿನ ಅಭ್ಯಾಸ. ಇದೇ ಪ್ರತಿಭೆಯಿಂದ ಇವರು ಸಿನಿಮಾ ನಿರ್ಮಾಣಕ್ಕೂ ಇಳಿಯುತ್ತಾರೆ. ನಿರ್ಮಾಪಕನಿಗೆ ಇವರು ಹೇಳಿದ ಕತೆಯೊಂದು ಒಪ್ಪಿಗೆ ಆಗಿಬಿಡುತ್ತದೆ. ಮುಂದೇನು? ಎಂದು ತಿಳಿಯಲು ಕಿರು ಚಿತ್ರ ನೋಡಬೇಕು.
16 ಎಂಎಂ ಕ್ಯಾಮೆರಾ ನಲ್ಲಿ ಕೊಡಾಕ್ ರೀಲ್ಸ್ ಬಳಸಿ ಚಿತ್ರೀಕರಣ ಮಾಡಲಾಗಿದೆ. ಬಳಿಕ ಡಿಜಿಟಲ್ ಅಲ್ಲಿ ಕನ್ವರ್ಟ್ ಮಾಡಲಾಗಿದೆ. 11 ದಿನದಲ್ಲಿ ಸಿನಿಮಾದ ಚಿತ್ರೀಕರಣವನ್ನು ದಿನೇಶ್ ಪೂರ್ತಿ ಮಾಡಿದ್ದಾರೆ.
ಉಳಿದ ಪ್ರಶಸ್ತಿಗಳು
ಅತ್ಯುತ್ತಮ ಆಕ್ಷನ್ ಡೈರೆಕ್ಷನ್ ಪ್ರಶಸ್ತಿ ಅರ್ಥಾತ್ ಬೆಸ್ಟ್ ಸ್ಟಂಟ್ ಕೊರಿಯೋಗ್ರಫಿ ಅವಾರ್ಡ್ ಸಹ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಪಾಲಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕೆ Anbariv ಸ್ಟಂಟ್ಸ್ ಕೊರಿಯೋಗ್ರಫಿ ಮಾಡಿದ್ದರು. ಇದೀಗ Anbariv ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.ಇನ್ನೂ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿ ಅವರಿಗೆ ಒಲಿದು ಬಂದಿದೆ. ‘ಕಾಂತಾರ’ ಚಿತ್ರದಲ್ಲಿನ ಆಕ್ಟಿಂಗ್‌ಗಾಗಿ ರಿಷಬ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ‘ಭರಪೂರ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಿತ್ರ’ ಪ್ರಶಸ್ತಿ ಸಿಕ್ಕಿದೆ.
ನಾನ್ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು 3 ಪ್ರಶಸ್ತಿಗಳು ಲಭಿಸಿವೆ. ‘ಅತ್ಯುತ್ತಮ ಸಂಕಲನ’ ಪ್ರಶಸ್ತಿಗೆ ‘ಮಧ್ಯಂತರ’ ಚಿತ್ರಕ್ಕಾಗಿ ಸಂಕಲನಕಾರ (ಎಡಿಟರ್) ಸುರೇಶ್ ಅರಸ್ ಭಾಜನರಾಗಿದ್ದಾರೆ.ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ಕನ್ನಡದ ‘ರಂಗ ವೈಭೋಗ’ ಚಿತ್ರದ ಪಾಲಾಗಿದೆ. ಈ ಚಿತ್ರವನ್ನ ಸುನೀಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.