Site icon Vistara News

777 Charlie: ಜಪಾನಿನಲ್ಲಿ `777 ಚಾರ್ಲಿ ಹವಾ’: ವರ್ಲ್ಡ್​​ ಟೂರ್‌ಗೆ ಧರ್ಮ ಹಾಗೂ ಚಾರ್ಲಿ ರೆಡಿ!

777 Charlie

ಬೆಂಗಳೂರು: ಪರಂವಃ ಸ್ಟುಡಿಯೋಸ್ (paramvah studios) ನಿರ್ಮಾಣದ, ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ `777 ಚಾರ್ಲಿ’ (777 Charlie) ಚಿತ್ರ ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗಿದೆ. ಇಂದೇ (ಜೂ.28) ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ತೆರೆ ಕಂಡಿದೆ.

ಜಪಾನ್ ಚಿತ್ರರಂಗದಲ್ಲಿ 1೦೦ ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ “ಶೋಚಿಕೋ ಮೂವಿ” (Shochiku Movie) ಎಂಬ ಸಂಸ್ಥೆ ಈ ಜಪಾನಿನಲ್ಲಿ ವಿತರಣೆ ಮಾಡಿದೆ. ವಿಶೇಷವೆಂದರೆ, ಇದೇ ಸಂಸ್ಥೆಯು ಈ ಹಿಂದೆ “Hachi: A Dog’s Tale” ಎಂಬ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಿತ್ತು. ಕಳೆದ ವರ್ಷ ಥೈಲ್ಯಾಂಡ್‌ನಲ್ಲಿ ಡಬ್ ಆಗಿ ಬಿಡುಗಡೆಗೊಂಡ `777 ಚಾರ್ಲಿ’ ಚಿತ್ರ, ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಕನ್ನಡ ಸಿನಿಮಾಗಳು ಬೇರೆ ದೇಶದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುವುದು ಹೆಚ್ಚಾಗಿದೆ. ‘KGF’ ಹಾಗೂ ‘ಕಾಂತಾರ’ ಚಿತ್ರಗಳು ಇದೇ ರೀತಿ ಸದ್ದು ಮಾಡಿತ್ತು. 2೦22ರ ಜೂನ್ 10 ರಂದು ‘777 ಚಾರ್ಲಿ’ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ ಕೂಡ ಲಭಿಸಿತ್ತು.

ಇದನ್ನೂ ಓದಿ: Rakshit Shetty: ʻರಿಚರ್ಡ್​ ಆಂಟನಿʼಯಲ್ಲಿ ಕರಾವಳಿ ಕಲಾವಿದರಿಗೆ ಮೊದಲ ಆದ್ಯತೆ ಅಂದ್ರಾ ರಕ್ಷಿತ್‌ ಶೆಟ್ಟಿ?

ಕಥೆ ಏನು?

ಪೋಷಕರನ್ನು ಕಳೆದುಕೊಂಡು ಗೊತ್ತು ಗುರಿಯಿಲ್ಲದೇ ತನ್ನದೇ ಪ್ರಪಂಚದಲ್ಲಿ ಯಾಂತ್ರಿಕ ಬದುಕು ನಡೆಸುತ್ತಿರುವ ಧರ್ಮ. ಅಚಾನಕ್ ಆಗಿ ಆತನ ಬದುಕಿಗೆ ನಾಯಿಯೊಂದು ಎಂಟ್ರಿ ಕೊಡುತ್ತದೆ. ಕಳೆಗುಂದಿದ ಆತನ ಬದುಕಿಗೆ ಆ ನಾಯಿ ಬಣ್ಣ ತುಂಬುತ್ತದೆ. ಅದಕ್ಕೆ ‘777 ಚಾರ್ಲಿ’ ಎಂದು ನಾಮಕರಣ ಮಾಡುತ್ತಾನೆ. ಇಂಟರ್‌ವಲ್ ವೇಳೆಗೆ ಕಥೆಗೆ ತಿರುವು ಸಿಗುತ್ತದೆ.

ಅತ್ಯುತ್ತಮ ಸಿನಿಮಾ

69ನೇ ರಾಷ್ಟ್ರೀಯ ಚಲನಚಿತ್ರ (National Film Awards 2023) ಪ್ರಶಸ್ತಿ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. 777 ಚಾರ್ಲಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರತಂಡ ಹಲವು ಕಡೆಗಳಲ್ಲಿ ಪ್ರೀಮಿಯರ್‌ ಶೋ ಏರ್ಪಡಿಸಿತ್ತು. ಇಲ್ಲಿಯೂ ಸಹ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಪ್ರಸಾರದ ಹಕ್ಕು ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು.

ರಾಜ್‌ ಬಿ ಶೆಟ್ಟಿ, ದಾನಿಶ್‌ ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದರು. ಕಿರಣ್‌ ರಾಜ್‌ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್‌ ಶೆಟ್ಟಿ ತಮ್ಮ ಹೋಮ್‌ ಬ್ಯಾನರ್‌ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದರು. ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡಿದ್ದರು. ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್‌ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್‌, ಕಾರ್ತಿಕಾ ನೈನನ್‌ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್‌ ಡಿಸೋಜಾ, ಸಾಯೇಶ್‌ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದರು.

Exit mobile version