ಬೆಂಗಳೂರು: ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ. ಉಪೇಂದ್ರ (A Movie Re-Release) ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. 2024ರ ಮೇ 17ರಂದು (ಶುಕ್ರವಾರದಂದು) “A” ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಾಯಕಿ ಚಾಂದಿನಿ (Actress Chandini ) ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇದು ನಾಯಕಿ ಚಾಂದಿನಿ ಜೀವನವೆನ್ನೇ ಬದಲಿಸಿದ ಒಂದು ಸಿನಿಮಾ. ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಅಂದರೆ ತಪ್ಪಾಗಲಾರದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಎಂದು ಸಿನಿಮಾ ಜಗತ್ತಿಗೆ ಉಪೇಂದ್ರ ರವರು ತೋರಿಸಿಕೊಟ್ಟರು. ಈ ಸಿನಿಮಾ ಆ ಕಾಲಕ್ಕೆ ಹೇಗೆ ಪ್ರಸ್ತುತವೋ, ಈ ಕಾಲಕ್ಕೂ ಕೂಡ ಈ ಸಿನಿಮಾ ಸಲ್ಲುತ್ತದೆ.
ವರ್ಣಿಸಲು ಪದಗಳೇ ಇಲ್ಲ
ನಾಯಕಿ ಚಾಂದಿನಿ “A” ಸಿನಿಮಾದಲ್ಲಿ ಹೇಗಿದ್ದರೋ, ಈಗಲು ಹಾಗೆ ಇದ್ದಾರೆ. ಅದಕ್ಕೆ ಅವರು ನೀಡುವ ಕಾರಣ, ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗು ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ “GOD IS GREAT” ಅನ್ನುವ ಹಾಗೆ, ಈ ಎರೆಡರ ಆಶೀರ್ವಾದದಿಂದ ನಾನು ಇವತ್ತಿಗೂ “A” ಚಾಂದಿನಿ ರೀತಿಯಲ್ಲೆ ಇದ್ದೀನಿ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಎನ್ನುತ್ತಾರೆ ನಾಯಕಿ.
ಇದನ್ನೂ ಓದಿ: Kangana Ranaut: ಲೋಕಸಭಾ ಚುನಾವಣೆ: ಕಂಗನಾ ʻಎಮರ್ಜೆನ್ಸಿʼ ಸಿನಿಮಾ ಮತ್ತೆ ಪೋಸ್ಟ್‌ಪೋನ್!
ʻʻನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ. ಅಂದಿಗು ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ ಅವರು. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ “A” ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು “A” ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರ ಋಣಿ. ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಮೇ 17 ಚಿತ್ರ ರೀ ರಿಲೀಸ್ ಆಗುತ್ತಿದೆ. ಈಗಲೂ ಭರ್ಜರಿ ಯಶಸ್ಸು ಕಾಣಲಿದೆ ಎಂದು ತಿಳಿಸಿದ ನಾಯಕಿ ಚಾಂದಿನಿ, ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆʼʼಎಂದಿದ್ದಾರೆ.
ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಆ ಕಾಲದಲ್ಲಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರ ʼಎʼ. ಅದುವರೆಗೆ ನಿರ್ದೇಶಕನಾಗಿ ಹಾಗೂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಉಪೇಂದ್ರ ಈ ಚಿತ್ರದ ಮೂಲಕ ನಾಯಕನಾಗಿಯೂ ಪರಿಚಿತರಾದರು. ವಿಭಿನ್ನ ಕಥಾ ಹಂದರ, ಮೇಕಿಂಗ್ ಶೈಲಿಯಿಂದ ಈ ಚಿತ್ರ ನೋಡುಗರನ್ನು ಆಕರ್ಷಿಸಿತ್ತು. ನಾಯಕಿಯಾಗಿ ಚಾಂದಿನಿ ಕಾಣಿಸಿಕೊಂಡ ಈ ಸಿನಿಮಾ ಸಾಂಪ್ರದಾಯಿಕ ಕಟ್ಟು-ಕಟ್ಟಳೆಗಳನ್ನು ಮುರಿದು ಪ್ರಯೋಗಾತ್ಮಕ ಚಿತ್ರ ಎನಿಸಿಕೊಂಡಿತ್ತು.
ಹಿಟ್ ಚಿತ್ರ
ಒಬ್ಬ ನಿರ್ದೇಶಕ ಹಾಗೂ ನಾಯಕಿಯ ನಡುವಿನ ಪ್ರೇಮಕಥೆಯನ್ನೆ ಈ ಚಿತ್ರ ಆಧರಿಸಿತ್ತು. ಆದರೆ ಅದನ್ನೇ ಉಪೇಂದ್ರ ವಿಭಿನ್ನವಾಗಿ ತೆರೆ ಮೇಲೆ ತಂದಿದ್ದರು. ಎಲ್ಲವನ್ನೂ ರಿವರ್ಸ್ ಸ್ಕ್ರೀನ್ ಪ್ಲೇಯಲ್ಲಿ ಉಪೇಂದ್ರ ಹೇಳಿದ್ದರು. ಈ ಪ್ರಯೋಗವನ್ನು ವೀಕ್ಷಕರೂ ಮೆಚ್ಚಿಕೊಂಡಿದ್ದರು. ಆ ಮೂಲಕ ಉಪೇಂದ್ರ ಎಂಬ ನಿರ್ದೇಶಕ ಮತ್ತು ನಟ ಗೆಲುವು ಸಾಧಿಸಿದ್ದರು. ಪರಿಣಾಮ ಸೂಪರ್ ಚಿತ್ರ ಹಿಟ್ ಆಗಿತ್ತು. ಜತೆಗೆ ಸಂಭಾಷಣೆಯೂ ಮೆಚ್ಚುಗೆ ಗಳಿಸಿತ್ತು.
ಮೋಡಿ ಮಾಡಿದ ಸಂಗೀತ
ಚಿತ್ರದ ಯಶಸ್ಸಿನಲ್ಲಿ ಸಂಗೀತದ ಪಾತ್ರವೂ ಮುಖ್ಯವಾಗಿತ್ತು. ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ವಿಶೇಷ ಎಂದರೆ ಗುರು ಕಿರಣ್ ʼಎʼ ಸಿನಿಮಾದ ಮೂಲಕ ಮೊದಲ ಬಾರಿ ಸಂಗೀತ ಸಂಯೋಜನೆ ಮಾಡಿದ್ದರು. ಮೊದಲ ಸಿನಿಮಾದಲ್ಲೇ ಸಿಕ್ಸರ್ ಭಾರಿಸಿದ್ದರು. ʼಸುಮ್ ಸುಮ್ನೆʼ, ʼಚಾಂದಿನಿʼ, ʼಹೇಳ್‌ಕೊಳ್ಳೊಕೆ ಒಂದೂರುʼ, ʼಇದು ಒನ್ ಡೇ ಮ್ಯಾಚ್ʼ, ʼಮಾರಿ ಕಣ್ಣುʼ ಹೀಗೆ ಸಿನಿಮಾದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಇಂದಿಗೂ ಈ ಹಾಡುಗಳನ್ನು ಸಿನಿ ಪ್ರೇಮಿಗಳು ಗುನುಗುತ್ತಿರುತ್ತಾರೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಸಿನಿಮಾ ಸುಮಾರು 20 ಕೋಟಿ ರೂ. ಗಳಿಸಿತ್ತು ಎನ್ನಲಾಗಿದೆ.
ಈ ಮಧ್ಯೆ ಹಲವು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನಕ್ಕೆ ಇಳಿದಿರುವ ʼಯುಐʼ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರದ ʼಟ್ರೋಲ್ ಆಗುತ್ತೆʼ ಹಾಡು ಸೂಪರ್ ಹಿಟ್ ಆಗಿದ್ದು, ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿಯೂ ʼಯುಐʼ ತೆರೆಗೆ ಬರಲಿದೆ.