ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ಫೈಟ್ ಮಾಸ್ಟರ್ ರವಿ ವರ್ಮಾ ಹಾಗೂ ಡಿಫರೆಂಟ್ ಡ್ಯಾನಿ (Ravi Varma-Diffrent Dany) ನಡುವೆ ಜಟಾಪಟಿಯಾಗಿದೆ. ಖ್ಯಾತ ಫೈಟ್ ಮಾಸ್ಟರ್ ರವಿ ವರ್ಮಾ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹಿರಿಯ ಫೈಟ್ ಮಾಸ್ಟರ್ ಆಗಿರುವ ಡ್ಯಾನಿ ಮಾಸ್ಟರ್ ಅಲಿಯಾಸ್ ಡಿಫರೆಂಟ್ ಡ್ಯಾನಿ, ಆರೋಪಿಸಿದ್ದಾರೆ. 11-3-24ರಂದು ಫಿಲಂ ಚೇಂಬರ್ ಮತ್ತು ನಿರ್ಮಾಪಕರ ಸಂಘಕ್ಕೆ ಡ್ಯಾನಿ ಮಾಸ್ಟರ್ ದೂರು ನೀಡಿದ್ದಾರೆ. ಇಂದು ಜ್ಞಾನ ಭಾರತಿ ಪೊಲೀಸ್ ಸ್ಟೇಶನ್‌ನಲ್ಲಿ ದೂರು ನೀಡಿದ್ದಾರೆ. ಸದ್ಯ ಬಹಿರಂಗವಾಗಿ ಹೇಳಿಕೆ ಕೊಟ್ಟು ಆಕ್ರೊಶ ಹೊರ ಹಾಕುತ್ತಿದ್ದಾರೆ ಡ್ಯಾನಿ.
ಡ್ಯಾನಿ ಮಾಸ್ಟರ್ ದೂರಿನಲ್ಲಿ ʻʻʻಜಾಕಿʼ ಸಿನಿಮಾದ ಫಿಲ್ಮ್ ಫೈಯರ್ ಫೈಟ್ ನಾನು ಮಾಡಿದ್ದು. ಆದರೆ ರವಿ ವರ್ಮಾ ಅವರು ಈ ಸೀನ್ ಫೈಟನ್ನು ನಾನು ಮಾಡಿದ್ದೇನೆ ಎಂದು ಪ್ರಭುದೇವ ಅವರಿಗೆ ಹೇಳಿ ಬಾಲಿವುಡ್ ಹೋಗಿದ್ದಾರೆ. ಈಗಾಗಲೇ ಮಾಧ್ಯಮವೊಂದರಲ್ಲಿ ತಿಳಿಸಿದ್ದೇನೆ. ಇದನ್ನು ನೋಡಿ ರವಿವರ್ಮ ಅವರು 4-5 ಬಾರಿ ಕರೆಯನ್ನು ಮಾಡಿದ್ದರು. ಆದರೆ ಕೌಟಂಬಿಕ ಕಾರಣಗಳಿಂದ ಆ ಸಮಯದಲ್ಲಿ ವಿಷಯವನ್ನು ತಿಳಿದುಕೊಳ್ಳಲು ಆಗದೇ ಫೋನ್ ಕರೆಯನ್ನು ಸ್ವೀಕರಿಸಿರಲಿಲ್ಲ. ಮಾತ್ರವಲ್ಲ ನನ್ನ ಸಹಾಯಕನಾದ ಕೆ.ಪಿ ಮಂಜು ಅವರಿಗೆ ರವಿ ವರ್ಮಾ ಅವರು ಫೋನ್ ಮಾಡಿ ನನ್ನ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆಯ ಬೆದರಿಕೆ ಕೊಟ್ಟಿದ್ದಾರೆ. ಅಲ್ಲದೆ, ‘ಮಾಸ್ತಿಗುಡಿ’ ಸಿನಿಮಾ ದುರಂತ ನಡೆದಾಗ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗಲೇ ಅವನನ್ನು (ಡ್ಯಾನಿ) ಮುಗಿಸಬೇಕು ಎಂದುಕೊಂಡಿದ್ದೆ, ಆದರೆ ನನ್ನ ಅಕ್ಕ ತಡೆದರು’ ಎಂದು ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಡ್ಯಾನಿ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Mayank Agarwal : ಸಂಚು ನಡೆದಿದೆ ಎಂದು ದೂರು ದಾಖಲಿಸಿದ ಮಯಾಂಕ್
ಡ್ಯಾನಿ ಮಾಸ್ಟರ್ ಹಾಗೂ ರವಿ ವರ್ಮಾ ನಡುವಿನ ಮುನಿಸು ಹಳೆಯದ್ದು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡ್ಯಾನಿ ಮಾಸ್ಟರ್, ‘ರವಿ ವರ್ಮಾ, ನನ್ನ ಕೆಲಸವನ್ನು ತನ್ನ ಕೆಲಸ ಎಂದು ಹೇಳಿಕೊಂಡು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ’ ಎಂದು ಆರೋಪ ಮಾಡಿದ್ದರು. ರವಿವರ್ಮಾ ಸುಳ್ಳುಗಾರ ಎಂದು ಸಹ ಹೇಳಿದ್ದರು. ಇದೀಗ ಡ್ಯಾನಿ, ರವಿ ವರ್ಮಾ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದಾರೆ.