ಬೆಂಗಳೂರು: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮಂಡ್ಯ ಕ್ಷೇತ್ರದಿಂದ (Mandya Lok Sabha constituency) ಸ್ಪರ್ಧೆ ಮಾಡುವ ತೀರ್ಮಾನ ಕೈಬಿಟ್ಟು ಕಮಲ ಹಿಡಿದಿರುವ ಸುಮಲತಾ ಅಂಬರೀಶ್, ಇನ್ನು ಮುಂದೆ ಬಿಜೆಪಿ ಕಾರ್ಯಕರ್ತಳಾಗಿ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಅವರ ಕೈ ಪೆಟ್ಟಾಗಿದ್ದು ಕಂಡು ಬಂದಿದ್ದು, ಇದೀಗ ನಟ ಆಪರೇಷನ್‌ಗೆ ಒಳಗಾಗಲಿದ್ದಾರೆ.
ಬಹಿರಂಗ ಸಭೆಯಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿ ʻʻಇಂದು ಆಸ್ಪತ್ರೆಗೆ ಆಡ್ಮಿಟ್ ಆಗಿ ನಾಳೆ ಆಪರೇಷನ್ ಮಾಡಿಸಿಕೊಳ್ಳಲಿದ್ದೇನೆ. ಅಮ್ಮನಿಗೆ ಮೊದಲೇ ಡೇಟ್ ಕೊಟ್ಟಿದ್ದೆ. ಇಂದು ಇಲ್ಲಿಗೆ ಬಂದೆʼʼಎಂದು ಹೇಳಿದರು. ಶೂಟಿಂಗ್ ಸಮಯದಲ್ಲಿ ದರ್ಶನ್ ಅವರ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಅವರ ಕೈಗೆ ಬೆಲ್ಟ್ ಹಾಕಲಾಗಿದೆ.
ಇದನ್ನೂ ಓದಿ: Actor Darshan: ದರ್ಶನ್ ಪುತ್ರ ವಿನೀಶ್ ಕುದುರೆ ಸವಾರಿ ಬಲು ಜೋರು! ವಿಡಿಯೊ ವೈರಲ್!
ಅಭಿಮಾನಿಗಳ ಬೇಸರದ ಬಗ್ಗೆ ಸುಮಲತಾ ಹೇಳಿದ್ದೇನು?
ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಕೆಲವರು ಅಸಮಾಧಾನವನ್ನು ಹೊರಹಾಕಿದರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್, ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ನಾನು ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮತ್ತೆ ಕೆಲವರು ಚಪ್ಪಾಳೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಅದು ನಿಮಗೆ ಕೇಳಲಿಲ್ಲವೇ? ಎಂದು ಮರು ಪ್ರಶ್ನೆಯನ್ನು ಹಾಕಿದರು. ನೋಡಿ, ಯಾವುದೇ ವಿಷಯದಲ್ಲಿಯಾದರೂ ಯಾರನ್ನೂ ನೂರಕ್ಕೆ ನೂರು ಮೆಚ್ಚಿಸಲು ಆಗುವುದಿಲ್ಲ. ಈ ವಿಷಯದಲ್ಲಿ ಕೆಲವರಿಗೆ ಈಗ ಅಸಮಾಧಾನ ಆಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಅಂಬರೀಶ್ ಅವರ ಅಭಿಮಾನಿಗಳು ಸದಾ ನನ್ನ ಬೆನ್ನ ಹಿಂದೆ ಇರಲಿದ್ದಾರೆ ಎಂಬ ನಂಬಿಕೆ ನನಗೆ ಇದೆ. ಈ ಹಿನ್ನೆಲೆಯಲ್ಲಿ ನಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ಎಚ್‌ಡಿಕೆ ಬೆಂಬಲ ಕೋರಿದ್ದಾರೆ
ಎಚ್.ಡಿ. ಕುಮಾರಸ್ವಾಮಿ ಅವರದ್ದು ಸೌಜನ್ಯಯುತ ಭೇಟಿಯಾಗಿತ್ತು. ಅವರು ನನ್ನನ್ನು ಭೇಟಿ ಮಾಡಿದ ವೇಳೆ ಈಗಿನ ಚುನಾವಣೆ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಹಳೆಯದ್ದನ್ನೆಲ್ಲ ಮರೆತು ಬಿಡಿ ಎಂದು ಮನವಿ ಮಾಡಿದ್ದರು. ಅಲ್ಲದೆ, ತಮಗೆ ಬೆಂಬಲ ಸೂಚಿಸಿ ಎಂದೂ ಅವರು ಕೇಳಿಕೊಂಡಿದ್ದರು ಎಂದು ಎಚ್‌ಡಿಕೆ ಭೇಟಿ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Lok Sabha Election 2024: ಅಧಿಕಾರಕ್ಕೆ ಅಂಟಿಕೊಂಡಿಲ್ಲವೆಂದು ಸುಮಲತಾ ಪತ್ರ; ನಾಳೆಯ ನಿರ್ಧಾರ ಏನು? ದರ್ಶನ್ ಭಾಗಿ!
ಇದು ನನ್ನ ಕಾರ್ಯಕರ್ತರ ಹಾಗೂ ಮಂಡ್ಯ ಜಿಲ್ಲೆಯ ಜನತೆಯ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಮಂಡ್ಯವೇ ನನ್ನ ಕರ್ಮ ಭೂಮಿ. ಹೀಗಾಗಿ ನನ್ನ ರಾಜಕಾರಣ ಮಂಡ್ಯ ಬಿಟ್ಟು ಒಂದಿಂಚೂ ಸಾಗದು. ಮುಂದೆ ನನಗೆ ಬೇರೆ ಬೇರೆ ಅವಕಾಶಗಳು ಸಿಗಬಹುದು. ಆದರೆ, ಮಂಡ್ಯದ ಜನರನ್ನು ಎಂದಿಗೂ ಮರೆಯಲಾರೆ ಎಂದು ಸುಮಲತಾ ಅಂಬರೀಶ್ ಹೇಳಿದರು.