ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಹಾಗೂ ನಿರ್ಮಾಪಕ ಉಮಾಪತಿ ನಡುವಿನ ವಾರ್ ತಾರಕ್ಕೇರಿದ್ದು ಗೊತ್ತೇ ಇದೆ. ಇದಾದ ಬಳಿಕ ಇದೆಲ್ಲದರ ನಡುವೆ ನಟ ದರ್ಶನ್ ಅಭಿಮಾನಿಗಳು ಉಮಾಪತಿ ಏರಿಯಾದಲ್ಲಿ ಬೈಕ್ ರ್‍ಯಾಲಿ ನಡೆಸಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದರು. ಆದರೀಗ ದರ್ಶನ್ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದಾಗಿದೆ. ನಗರದಲ್ಲಿ ಸಾರ್ವಜನಿಕ ಮೆರವಣಿಗೆ, ರ್‍ಯಾಲಿ ನಡೆಸಲು ಅವಕಾಶ ಇಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಅನುಮತಿ ನಿರಾಕರಣೆ ಆಗಿದೆ.
ನಿರ್ಮಾಪಕ ಉಮಾಪತಿ ಅವರು ಹೆಚ್.ಎಸ್. ಆರ್ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಹಾಗಾಗಿ ಬೊಮ್ನನಹಳ್ಳಿಯ ಮಹಾ ಗಣಪತಿ ದೇವಸ್ಥಾನದಿಂದ ಹೆಚ್.ಎಸ್. ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್‌ವರೆಗೂ ಬೈಕ್ ರ್‍ಯಾಲಿ ನಡೆಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮತಿ ಕೋರಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರ್‍ಯಾಲಿಗೆ ಅನುಮತಿ ನೀಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದರಿಂದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇದನ್ನೂ ಓದಿ: Actor Darshan: ʻಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ: ಪೊಲೀಸರಿಂದ ಅನುಮತಿ ಸಿಕ್ತಾ?
ಉಮಾಪತಿ ಶ್ರೀನಿವಾಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್ ಅವರು ಉಮಾಪತಿ ಶ್ರೀನಿವಾಸ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಉಮಾಪತಿ ಶ್ರೀನಿವಾಸ್ ಆ ಚುನಾವಣೆಯಲ್ಲಿ ಸೋತಿದ್ದರು.
ಈಗ ಮುಂದಿನ ವಿಧಾನಸಭೆ ಚುನಾವಣೆಗೆ ಅವರು ತಯಾರಾಗುತ್ತಿದ್ದಾರೆ. ಹೀಗಾಗಿ ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ಈ ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು.