ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಅರೆಸ್ಟ್ ಆದ ಬಳಿಕ ಪರೋಕ್ಷವಾಗಿ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದರು. ʻಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆʼಎಂದು ಬರೆದುಕೊಂಡಿದ್ದರು. ಈ ಹಿಂದೆ ‘ತೋತಾಪುರಿ’ ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಸಿತ್ತು. ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದರು. ಈ ಘಟನೆಯ ಕುರಿತು ಜಗ್ಗೇಶ್ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ಈ ವಿಡಿಯೊ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಹಿರಿಯ ಕಲಾವಿದರಿಗೆ ಬೆಲೆ ಕೊಡ್ತಾ ಇಲ್ಲ ಎಂಬ ಮಾತುಗಳನ್ನು ಜಗ್ಗೇಶ್ ಈ ಹಿಂದೆ ಹೇಳಿಕೊಂಡಿದ್ದರು. ಇದು ರೌಡಿಸಂ ಸೆಂಟರ್ ಅಲ್ಲ ಎಂದೂ ಹೇಳಿದ್ದರು. ಸದ್ಯ ಈಗ ಆ ಮಾತು ನಿಜ ಆಗುತ್ತಿದೆ ಎಂದು ಕೆಲವರು ವಿಡಿಯೊವನ್ನು ಮತ್ತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಜಗ್ಗೇಶ್ ಹೇಳಿದ್ದೇನು?
‘ಸಿನಿಮಾ ರಂಗದಲ್ಲಿ ನಾನು 40 ವರ್ಷ ಕೆಲಸ ಮಾಡಿದ್ದೇನೆ. ನಾನು ಏನು ಎಂಬುದು ಮಾಧ್ಯಮದವರಿಗೆ ಗೊತ್ತಿದೆ. ನನ್ನ ಜತೆ ಮಾತನಾಡಲು ಹುಡುಗರ ಬಂದಾಗ ನಾನೇನೂ ಓಡಿಹೋಗಿಲ್ಲ. ಯಾವುದೋ ಒಂದು ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್‌ಗೆ ಅಪಮಾನ ಮಾಡಿಬಿಟ್ವಿ ಅಂತ ನಿಮಗೆ ಅನಿಸಿದರೆ ಅದರಿಂದ ನನಗೆ ಯಾವುದೇ ನೋವು, ನಷ್ಟ ಇಲ್ಲʼʼಎಂದಿದ್ದರು.
‘ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಈ ಯಾವನೂ ಹುಟ್ಟಿರಲಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ಯಾರಿಗೆ ಬಕೆಟ್ ಹಿಡಿಯುತ್ತಿದ್ದೀರೋ ಅವರು ಯಾರೂ ಹುಟ್ಟಿರಲಿಲ್ಲ. 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು. ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್‌ನಾಗ್, ಪ್ರಭಾಕರ್, ಅನಂತ್‌ನಾಗ್ ಅವರ ಜೊತೆ ಹೆಜ್ಜೆ ಹಾಕಿದವನು ನಾನು. ಅಂಥವರ ಜೊತೆ ಬದುಕಿದವನು ನಾನು. ಇವತ್ತು ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ನಿಮ್ಮ ಯಾರಿಂದಲೂ ಅಲ್ಲ. ಕನ್ನಡಿಗರಿಂದ, ಕನ್ನಡಿಗರ ಪ್ರೀತಿಯಿಂದ. ಜಗ್ಗೇಶ್ ಕಾಗೆ ಹಾರಿಸುತ್ತಾನೆ ಎನ್ನುತ್ತೀರಾ? ನನ್ನ ಬದುಕಿನಲ್ಲಿ ನಾನು ಕಾಗೆ ಹಾರಿಸುವುದಾಗಿದ್ದರೆ 20 ಸಾರಿ ಎಂಎಲ್‌ಎ ಆಗುತ್ತಿದ್ದೆ. 20 ಬಾರಿ ಮಂತ್ರಿ ಆಗುತ್ತಿದ್ದೆ. ಬಕೆಟ್ ಹಿಡಿದು ಬೂಟ್ ನೆಕ್ಕಿದ್ದರೆ ನೂರಾರು ಪೋಸ್ಟ್‌ಗಳನ್ನು ನಾನು ತೆಗೆದುಕೊಳ್ಳುತ್ತಿದ್ದೆ. ಇವತ್ತು ನಾನು ಸ್ವಾಭಿಮಾನಿಯಾಗಿ ಬದುಕುತ್ತಿರುವುದು ನಿಮ್ಮಿಂದ ಈ ಮಾತುಗಳನ್ನು ಕೇಳಿಸಿಕೊಳ್ಳೋಕೆ ಅಲ್ಲ. ಈ ಕರ್ನಾಟಕದಲ್ಲಿ ನನ್ನ ಮೈ ಮುಟ್ಟೋಕೆ ಯಾವನಿಗಾದ್ರೂ ಆಗತ್ತಾ?’ಎಂದು ಹೇಳಿದ್ದರು.
ಇದನ್ನೂ ಓದಿ: Actor Darshan: ಅಪ್ಪನನ್ನು ಬೈದಿದ್ದಕ್ಕೆ ಥ್ಯಾಂಕ್ಸ್ ಎಂದ ದರ್ಶನ್ ಪುತ್ರ ವಿನೀಶ್; ಪೋಸ್ಟ್‌ನಲ್ಲಿ ಇನ್ನೇನಿದೆ?
ನಾವು ಸತ್ತಮೇಲೆ ನಮ್ಮ ತಿಥಿ ಮಾಡಿ ಆನಂದ ಪಡಿ
ʻʻರಾಜ್‌ಕುಮಾರ್, ಅಂಬರೀಷ್, ವಿಷ್ಟುವರ್ಧನ್ ಸತ್ತ ಮರುದಿನ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದಿರುವುದು ನಾವು ಮೂರ್ನಾಲ್ಕು ಜನ ಮಾತ್ರ. ನಾನು, ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ರವಿಚಂದ್ರನ್ ಮಾತ್ರ. ನಾವು ಸತ್ತಮೇಲೆ ನಮ್ಮ ತಿಥಿ ಮಾಡಿ ಆನಂದ ಪಡಿ, ಸಂತೋಷಪಡಿ. ನನ್ನ ಒಕ್ಕಲಿಗತನದ ಬಗ್ಗೆ ಮಾತನಾಡಿದಾಗ ನಾನು ಸುಮ್ಮನಿದ್ದೇನೆ. ಅಲ್ಲಿ 20 ಜನ ಹುಡುಗರು ಬಂದಿದ್ದರು. ಅವರಲ್ಲಿ ಉದ್ವೇಗ ಇತ್ತು. ಒಪ್ಪಿಕೊಳ್ಳುತ್ತೇನೆ. ನಾನು ಓಡಿ ಹೋಗಲಿಲ್ಲವಲ್ಲ. ಗಂಡಸು ಥರ ಇದ್ದುಕೊಂಡು ಮಾತಾಡಿದ್ದೇನೆ. ನನಗೆ ಅವರು ಬುದ್ದಿ ಕಲಿಸಬೇಕಾಗಿಲ್ಲ. ನನಗೆ ಬುದ್ದಿ ಕಲಿಸಬೇಕಾಗಿರುವುದು ರಾಘವೇಂದ್ರ ಸ್ವಾಮಿಗಳು, ಕನ್ನಡಿಗರು ಮತ್ತು ನನ್ನನ್ನು ಹೆತ್ತ ಜನʼʼಎಂದರು.
ಇದು ರೌಡಿಸಂ ಸೆಂಟರ್ ಅಲ್ಲ
ʻʻಇಂಥ ಸ್ಥಿತಿಗತಿಯನ್ನು ನೀವು ಬೆಳೆಸಿದರೆ ಚಿತ್ರರಂಗದಲ್ಲಿ ರೌಡಿಸಂ ಶುರು ಮಾಡುತ್ತಾರೆ. ಎಲ್ಲ ನಟರನ್ನೂ ಹೆಸರಿಸೋಕೆ ಶುರು ಮಾಡುತ್ತಾರೆ. ಅದನ್ನು ನೀವು ನಿಲ್ಲಿಸಲೇಬೇಕು. ಇದು ರೌಡಿಸಂ ಸೆಂಟರ್ ಅಲ್ಲ. ಇಲ್ಲಿ ಕೂತು-ನಿಂತು ಮಾತನಾಡಬೇಕು. ದೊಡ್ಡವರು-ಚಿಕ್ಕವರು ಇದ್ದಾರೆ. ಇವತ್ತು ಒಬ್ಬ ನಟನ ಸಿನಿಮಾ ಹಿಟ್ ಆಯ್ತು ಎಂದರೆ, ಮತ್ತೊಬ್ಬ ನಟ ಹುನ್ನಾರ ಮಾಡ್ತಾನೆ. ನಾವೆಲ್ಲರೂ ಬೆಳೆಯೋಣ ಎಂಬ ಭಾವನೆ ಇಲ್ಲ. ನಾನೊಬ್ಬನೇ ಬೆಳೆಯಬೇಕು ಎಂಬ ಸ್ಥಿತಿ ಬರ್ತಾ ಇದೆ. ಅಪಮಾನ ಮಾಡುವಂತವರನ್ನು ಪ್ರೋತ್ಸಾಹಿಸಬೇಡಿ ಎಂದು ಕನ್ನಡಿಗರಲ್ಲಿ ನಾನು ವಿನಂತಿ ಮಾಡುತ್ತೇನೆ’ ಎಂದಿದ್ದರು ಜಗ್ಗೇಶ್.
ಇದೀಗ ಜಗ್ಗೇಶ್ ಮಾತನಾಡಿರುವ ಈ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಜಗ್ಗೇಶ್ ಅವರ ಈ ಮಾತುಗಳಿಗೆ ಕೆಲವರು ಸಾಥ್ ಕೊಟ್ಟಿದ್ದಾರೆ.
ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ಕರ್ಮ ಫಲ ಎಂದು ಜಗ್ಗೇಶ್ ಟ್ವೀಟ್
ʻಸರ್ವ ಆತ್ಮಾನೇನ ಬ್ರಹ್ಮ” ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನವನ್ನು ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕು ತತಕ್ಷಣ ಫಲಿತಾಂಶ ಉಂಟು! ರಾಮನಾಗು.. ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!ʼʼಎಂದು ಬರೆದುಕೊಂಡಿದ್ದಾರೆ. ಮದ ಇದ್ದವನಿಗೆ ಕರುಣೆ ಎಂಬುದೆಲ್ಲ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ.ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.