ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿ ಮಾಡಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಚಾರ್ಜ್ ಶೀಟ್ ಸಲ್ಲಿಕೆಗೆ ಪ್ರಮುಖ ಸಾಕ್ಷಿದಾರ ಪೊಲೀಸರಿಗೆ ಸಿಕ್ಕಂತಾಗಿದೆ. ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಪೊಲೀಸರು ಈ ವರೆಗೆ ಸುಮಾರು 200 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರಂತೆ. ಇದರ ಬೆನ್ನಲ್ಲೇ ಗಂಡನ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ದೇವಸ್ಥಾನ ಸುತ್ತುತ್ತಿದ್ದಾರೆ.
ನಿನ್ನೆ ಅಮವಾಸ್ಯೆ ಪ್ರಯುಕ್ತ ಬನಶಂಕರಿ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಪತಿಯನ್ನ ಆಚೆ ತರಲು ವಿಜಯಲಕ್ಷ್ಮಿ ಶಕ್ತಿ ದೇವತೆಗಳ ಮೋರೆ ಹೋಗಿದ್ದಾರೆ. ಅತ್ತ
ಮಾವನಿಗಾಗಿ ಅಳಿಯ ಕೂಡ ಆರತಿ ಉಕ್ಕಡದಲ್ಲಿ ದರ್ಶನ್ ಅಳಿಯ ಚಂದನ್ ನಿಂದ ವಿಶೇಷ ಪೂಜೆ ನೆರವೇರಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಆರತಿ ಉಕ್ಕಡ ದೇಗುಲವಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದ ಬಳಕೆಯನ್ನು ಪೊಲೀಸರು ಮಾಡುತ್ತಿದ್ದು ಸಾಕ್ಷ್ಯವನ್ನು ಇನ್ನಷ್ಟು ಪ್ರಬಲಗೊಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶೆಡ್, ದರ್ಶನ್ ಮನೆ, ಸ್ಟೂನಿ ಬ್ರೂಕ್ ರೆಸ್ಟೊರೆಂಟ್, ಶೆಡ್ಗೆ ಹೋಗುವ ರಸ್ತೆ ಇನ್ನೂ ಹಲವು ಕಡೆಗಳಿಂದ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿರುವ ಮೊಬೈಲ್ ವಿಡಿಯೋಗಳನ್ನು ಸಹ ಕಲೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಕ್ಷಿಗಳನ್ನು ಇನ್ನಷ್ಟು ಬಲಗೊಳಿಸಲು ವಿಷ್ಯುಯಲ್ ಕಂಪಾರಿಷನ್ ತಂತ್ರಜ್ಞಾನವನ್ನು ಪೊಲೀಸರು ಬಳಸಿದ್ದಾರೆ ಎನ್ನಲಾಗಿದೆ. ವಿಷ್ಯುಲ್ ಕಂಪಾರಿಷನ್ನಿಂದ ಬೇರೆ ಬೇರೆ ವಿಡಿಯೋಗಳಲ್ಲಿರುವ ವ್ಯಕ್ತಿಗಳು ಒಬ್ಬರೇ ಹೌದೇ ಅಲ್ಲವೆ ಎಂಬುದು ತಿಳಿಯುತ್ತದೆ. ಹಾಗೂ ವಿಡಿಯೋ ನಕಲಿಯೇ, ಅಸಲಿಯೇ, ಗ್ರಾಫಿಕ್ಸ್ ಮಾಡಲಾಗಿದೆಯೇ ಇನ್ನಿತರೆ ವಿಷಯಗಳು ಸಹ ತಿಳಿದು ಬರಲಿದೆ ಎನ್ನಲಾಗಿದೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖವಾಗಿ ಬಳಸಿರೋ ಸಾಧನ ಮೆಗ್ಗರ್ ಬಗ್ಗೆ ಮಹತ್ವದ ಮಾಹಿತಿ ತಿಳಿಸದುಬಂದಿದೆ. ಕರೆಂಟ್ ಶಾಕ್ ನೀಡಲೆಂದೇ ಮೆಗ್ಗರ್ ಅನ್ನು ಖರೀದಿ ಮಾಡಿರೋದು ತನಿಖೆ ವೇಳೆ ಬೆಳಕಿಗೆ. ಪ್ರಕರಣದ ಆರೋಪಿ ಧನರಾಜ್ ಅಮೆಜಾನ್‌ನಲ್ಲಿ ಮೆಗ್ಗರ್ ಡಿವೈಸ್ ಬುಕ್ ಮಾಡಿದ್ದು, ಅದರ ಬೆಲೆ 699 ರೂಪಾಯಿಗಳಾಗಿದೆ. ಇನ್ನು ಬುಕ್ ಮಾಡಿದ ಮೆಗ್ಗರ್ ಅನ್ನು ಸ್ವೀಕರಿಸುವ ವೇಳೆ ಸ್ಕ್ಯಾನರ್ ಮೂಲಕ ಹಣ ಪೇ ಮಾಡಲು ಧನರಾಜ್ ಯತ್ನಿಸಿದ್ದ. ಆದರೆ ಅಮೆಜಾನ್ ಪೇ ಕೋಡ್ ಸ್ಕ್ಯಾನ್ ಮಾಡಿದ ವೇಳೆ ಹಣ ಸೆಂಡ್ ಆಗದ ಕಾರಣ ಆನ್ ಲೈನ್ ಮೂಲಕ ಹಣವನ್ನು ಕಳುಹಿಸಿದ್ದ ಧನರಾಜ್. ಆ ಹಣವನ್ನು ಡೆಲಿವರಿ ಬಾಯ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದು ಕಂಪನಿಗೆ ನೀಡಿದ್ದ. ಸದ್ಯ ಆ ಮಾಹಿತಿ ಕಲೆ ಹಾಕಿರೋ ಪೊಲೀಸರು ಮೆಗ್ಗರ್ ಡಿವೈಸ್ ಧನರಾಜ್‌ಗೆ ತಂದುಕೊಟ್ಟ ಡೆಲಿವರಿ ಬಾಯ್‌ನ ವಿಚಾರಣೆ ಮಾಡಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.