Site icon Vistara News

Actor Dwarakish: ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish will be cremated with honours

ಬೆಂಗಳೂರು:  ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್‌ (81) (Actor Dwarakish) ಅವರು ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ. ಈಗಾಗಲೇ ರವೀಂದ್ರ ಕಲಾಕ್ಷೇತ್ರದಲ್ಲಿ 11:30ರವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೂ ಅಂತಿಮ ದರ್ಶನ ಪಡೆದಿದ್ದಾರೆ. ನಟ ದ್ವಾರಕೀಶ್ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಕಿಚ್ಚ ಸುದೀಪ್ ಕೂಡ ಕಲಾಕ್ಷೇತ್ರಕ್ಕೆ ಆಗಮಿಸಿ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದು ಭಾವುಕರಾದರು. ಸಮಲತಾ ಅಂಬರೀಶ್‌, ರಾಕ್‌ಲೈನ್‌ ವೆಂಕಟೇಶ್‌, ಹಂಸಲೇಖ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಸುಮಲತಾ ಅಂಬರೀಶ್‌ ಮಾತನಾಡಿ ʻʻಕನ್ನಡ ಚಿತ್ರರಂದಲ್ಲಿ ಯಶಸ್ವಿ ನಿರ್ದೇಶಕ ನಟ ದ್ವಾರಕೀಶ್‌. ಅಂಬರೀಶ್‌ ಅವರ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ವಿಷ್ಣುವರ್ಧನ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಅವರಿಗೆ ನೆಮ್ಮದಿಯಿಂದ ಶಾಂತಿಯುತ ಸಾವನ್ನು ಆ ದೇವರು ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿʼʼಎಂದರು.

ಇದನ್ನೂ ಓದಿ: Actor Dwarakish: ದ್ವಾರಕೀಶ್ ನಿಧನಕ್ಕೆ ಮುದ್ದು ಶ್ವಾನದ ಮೂಕ ವೇದನೆ

ಹಂಸಲೇಖ ಮಾತನಾಡಿ ʻʻದ್ವಾರಕೀಶ್ ಎಂದರೆ ಎಂಟರ್‌ಟೈನ್‌ಮೆಂಟ್‌. ಸಿನಿಮಾಗಾಗಿ ಹುಟ್ಟಿ ಸಿನಿಮಾ ಮೂಲಕವೇ ಬದುಕಿದವರು. ಅವರ ಜೀವನ ಹಲವಾರು ಜೀವಗಳಿಗೆ ಸ್ಫೂರ್ತಿ. 40ವರ್ಷಗಳಿಂದ ದ್ವಾರಕೀಶ್ ಅವರ ಜತೆ ಸ್ನೇಹ ಇದೆ. ನೇರ ಮಾತು ನುಡಿಗಳಿಂದ ಎಲ್ಲರಿಗೂ ಇಷ್ಟವಾಗಿದ್ದರು. ಅವರ ಕಣ್ಣುಗಳನ್ನ ದಾನ ಮಾಡಿದ್ದಾರೆ ಅಂದರೆ ಅದು ದೊಡ್ಡ ವಿಷಯ ಅಲ್ಲ. ಕಾರಣ ಅವರದ್ದು ವಿಶಾಲ ಹೃದಯ. ವಿಷ್ಣು ವರ್ಧನ್ ಅವರು ಈ ಮಟ್ಟಕ್ಕೆ ಬೆಳೆಯಲು ದ್ವಾರಕೀಶ್ ಅವರೇ ಕಾರಣʼʼಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ ʻʻದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅತ್ಯದ್ಭುತ ನಟನೆ ಮಾಡಿದ್ದಾರೆ. ನಿರ್ಮಾಪಕನಾಗಿ, ಹಾಸ್ಯ ನಟನಾಗಿ, ನಿರ್ದೇಶಕರಾಗಿ ಗೆದ್ದಿದ್ದಾರೆ. ಕನ್ನಡ ಸೇವೆಯನ್ನು ಮಾಡಿದ ಅಪ್ರತಿಮ ಸಾಧಕ. ದ್ವಾರಕೀಶ್ ಅವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದರು. ದ್ವಾರಕೀಶ್‌ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆʼʼಎಂದರು.

ಇದನ್ನೂ ಓದಿ: Actor Dwarakish: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್!

ದ್ವಾರಕೀಶ್‌ ದರ್ಶನದ ಬಳಿಕ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಚಾಮರಾಜನಗರ ಟಿಆರ್ ಮಿಲ್ ಪಕ್ಕದ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ. ದುಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮಗ ಸಂತೋಷ್ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ

Exit mobile version