Site icon Vistara News

Actor Prakash Raj: ಮಾರ್ಚ್ 15ಕ್ಕೆ ಪ್ರೇಕ್ಷಕರ ಎದುರು ಬರ್ತಿದೆ ʻಫೋಟೋʼಸಿನಿಮಾ!

Actor Prakash Raj present Photo directed by debutant Utsav Gonwar

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ʻಫೋಟೋʼ ಸಿನಿಮಾದ ಮೊದಲ ಲುಕ್‌ ಅನಾವರಣಗೊಂಡಿತ್ತು. ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೈಲರ್‌ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ನಿರ್ದಿಗಂತ ಫಾರಂ ಹೌಸ್‌ನಲ್ಲಿ ʻಫೋಟೋʼ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಹರಗಾರರು ಹಾಗೂ ಪತ್ರಕರ್ತರಾಗಿರುವ ಜೋಗಿ, ಪ್ರಕಾಶ್ ರಾಜ್ (Actor Prakash Raj), ನಿರ್ದೇಶಕ ಉತ್ಸವ್ ಗೋನವಾರ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಟ್ರೈಲರ್‌ ಬಿಡುಗಡೆ ಬಳಿಕ ಡಾಲಿ ಧನಂಜಯ್ ಮಾತನಾಡಿ, ʻಉತ್ಸವ್ ಅವರು ತುಂಬಾ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತುಂಬಾ ಖುಷಿ ವಿಚಾರ ಏನೆಂದರೆ ಇತ್ತೀಚೆಗೆ ಬರುತ್ತಿರುವ ಯುವ ನಿರ್ದೇಶಕರು ಒಳ್ಳೊಳ್ಳೆ ಸಿನಿಮಾಗಳನ್ನು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ನಮ್ಮ ಕನ್ನಡದ ಜನಗಳ ಮುಂದೆ ಬರುತ್ತಿದ್ದಾರೆ. ಅದು ತುಂಬಾ ಖುಷಿ ವಿಚಾರ. ಆ ರೀತಿಯ ಸಿನಿಮಾಗಳಿಗೆ ಒಬ್ಬೊಬ್ಬರು ಜತೆಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ರಾಜ್ ಸರ್ ಜತೆಯಾಗಿದ್ದಾರೆ. ನಾನು ಮೈಸೂರಿಗೆ ಬಂದಾಗ ಇಲ್ಲಿ ಎರಡು ಮೂರು ಬಾರಿ ಇಲ್ಲಿಗೆ ಬಂದಿದ್ದೇನೆ. ಒಂದು ಗುರಿ ಇಟ್ಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೇಗೆ ಟೈಮ್ ಆಗುತ್ತದೆಯೋ ಗೊತ್ತಿಲ್ಲ. ತೋಟಗಾರಿಕೆ, ರಂಗಭೂಮಿ ಎಲ್ಲವನ್ನೂ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ʻಫೋಟೊʼ ಕಾಡುವ ಸಿನಿಮಾ. ಉತ್ಸವ ಅವರಿಗೆ ಒಳ್ಳೆಯದು ಆಗಲಿʼʼ ಎಂದರು.

ಇದನ್ನೂ ಓದಿ: Aadhaar Card: 5 ವರ್ಷದೊಳಗಿನ ಮಕ್ಕಳಿಗೆ ಬಾಲ್‌ ಆಧಾರ್‌; ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಲೂಸಿಯಾ ಪವನ್ ಮಾತನಾಡಿ, ʻʻಫೋಟೋʼʼ ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಪೋಸ್ಟ್ ಮಾಡುತ್ತಿದ್ದರು. ತುಂಬಾ ಚೆನ್ನಾಗಿದೆ ಎಂದು ಫೀಡ್ ಬ್ಯಾಕ್ ಬರುತ್ತಿತ್ತು. ನಾನು ಸಿನಿಮಾ ನೋಡಿದ್ದೇನೆ. ತುಂಬಾ ಪ್ರಭಾವ ಬೀರಿತು. ಲಾಕ್ ಡೌನ್ ಕಷ್ಟಗಳನ್ನು ಸಿನಿಮ್ಯಾಟಿಕ್ ಆಗಿ ನೋಡುವುದು ಬಹಳ ಇಂಪ್ಯಾಕ್ಟ್ ಆಗುತ್ತದೆ. ಮೇಕಿಂಗ್ ನೋಡಿದಾಗ ಬಹಳಷ್ಟು ಸ್ಪೂರ್ತಿಯಾಯ್ತು. ಇಡೀ ತಂಡಕ್ಕೆ ಒಳ್ಳೆಯದು ಆಗಲಿʼʼ ಎಂದರು.

ಪ್ರಕಾಶ್ ರಾಜ್ ಮಾತನಾಡಿ, ʻʻನಮ್ಮ ದೇಹಕ್ಕೆ ಆದ ಗಾಯಗಳು ಇದೆಯಲ್ಲ. ಅದು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ಇದೆಯಲ್ಲ ನಾವು ಸುಮ್ಮನಿದಷ್ಟು ಜಾಸ್ತಿಯಾಗುತ್ತದೆ. ನನಗೆ ಉತ್ಸವ್ ಸಿನಿಮಾನಾ ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ಬ್ಯುಸಿ ಇದ್ದೆ. ಸಿನಿಮಾ ನೋಡಿ ಆದ್ಮೇಲೆ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟೂ ದುಃಖ ಬಂತು. ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಇದ್ದೇವು. ಇಡೀ ಪ್ರಪಂಚ ಲಾಕ್ ಡೌನ್ ಆಗಿದೆ ಎಲ್ಲಿ ಹೋಗುವುದು ಗೊತ್ತಿಲ್ಲ. ಹೋಗಲು ದಾರಿ ಗೊತ್ತಿಲ್ಲ. ಇದು ನಾವು ಲಾಕ್ ಡೌನ್ ನಲ್ಲಿ ನೋಡಿದ ನೈಜ ಸ್ಥಿತಿ ಇದು. ಲಾಕ್ ಡೌನ್ ಸಮಯದಲ್ಲಿ ಒಬ್ಬರು ಲಾರಿ, ಬಸ್ ತೆಗೆದುಕೊಂಡು ಹೋಗಿ ಅವರನ್ನು ಮನೆಗೆ ಯೋಚನೆ ಮಾಡಿಲ್ಲ. ಈ ನೋವುಗಳನ್ನು ದಾಖಲೆ ಮಾಡ್ಬೇಕು ಅಂತಾ 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಾವು ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲೋಣ ಎಂದು ಇದನ್ನು ರಿಲೀಸ್ ಮಾಡಲು ನಿಂತೆವುʼʼ ಎಂದರು.

ನಿರ್ದೇಶಕ ಉತ್ಸವ್ ಗೋನವಾರ ಮಾತನಾಡಿ, ʻʻಲಾಕ್ ಡೌನ್‌ಗೂ ಮುಂಚೆ ನಾನು ಕೂರ್ಗ್‌ಗೆ ಹೋಗಿದ್ದೆ. ಆ ಸಮಯದಲ್ಲೊಂದು ಆರ್ಟಿಕಲ್ ಓದಿದ್ದೆ. ಗಂಗಮ್ಮ ಎಂಬ ಗರ್ಭಿಣಿ ಬೆಂಗಳೂರಿಂದ ಊರಿಗೆ ಹೋಗಬೇಕಾದರೆ ಮಧ್ಯೆದಲ್ಲಿ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿ ಸತ್ತು ಹೋಗ್ತಾರೆ. ಬಳ್ಳಾರಿ ಹತ್ತಿರ. ಈ ಆರ್ಟಿಕಲ್ ತುಂಬಾ ಕಾಡಿತು. ಈ ವಿಷ್ಯ ಡಾಕ್ಯುಮೆಂಟ್ ಆಗಬೇಕು ಎಂದು ಅನಿಸಿತು. ಆಗ ಬರೆಯಲು ಶುರು ಮಾಡಿದೆ. ಆ ನಂತರ ಅದನ್ನು ಸಿನಿಮಾ ಮಾಡಿದೆʼʼ ಎಂದರು.

ಕನ್ನಡದ ಈ ʻಫೋಟೋʼ ಚಿತ್ರವನ್ನ ಸ್ವತಃ ಪ್ರಕಾಶ್ ರಾಜ್ ಪ್ರಸೆಂಟ್ ಮಾಡುತ್ತಿದ್ದಾರೆ. ತಮ್ಮ ನಿರ್ದಿಗಂತ ಮೂಲಕ ಈ ಚಿತ್ರಕ್ಕೆ ಬೆಂಬಲವಾಗಿಯೇ ನಿಂತಿದ್ದಾರೆ. ಹೊಸ ಪ್ರತಿಭೆಗೆ ಈ ಮೂಲಕ ಹೆಗಲುಕೊಟ್ಟಿದ್ದಾರೆ. ʻಫೋಟೋʼ ಮೂಲಕ ಸ್ವತಂತ್ರವಾಗಿ ಡೈರೆಕ್ಟರ್ ಆಗಿರುವ ಉತ್ಸವ್ ಗೋನವಾರ, ಇಲ್ಲಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನಡೆದ ಕಥೆಯನ್ನು ಮನಸ್ಸಿಗೆ ತಾಕುವಂತೆ ದೃಶ್ಯ ರೂಪಕ್ಕೆ ಇಳಿಸಿ ಪ್ರಕಾಶ್ ರಾಜ್ ಅವರಂತಹ ನಟರೂ ಒಪ್ಪಿಕೊಳ್ಳುವಂತೆ ಸಿನಿಮಾ ಮಾಡಿದ್ದಾರೆ.

ಮಸಾರಿ ಟಾಕೀಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ʻಫೋಟೋʼ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್, ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಅವರು ಕ್ಯಾಮೆರಾ ಹಿಡಿದಿದ್ದು, ಮತ್ತು ರವಿ ಹಿರೇಮಠ್ ಹಿನ್ನೆಲೆ ಸಂಗೀತ, ಶಿವರಾಜ್ ಮೆಹೂ ಕತ್ತರಿ ಕೆಲಸ ಚಿತ್ರಕ್ಕಿದೆ. ಮಾರ್ಚ್ 15ಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಯುವುದಕ್ಕೆ ʻಫೋಟೋʼ ತೆರೆಗೆ ಬರುತ್ತಿದೆ.

Exit mobile version