ಬೆಂಗಳೂರು: ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ʻರಾಮಾಯಣʼ (Actor Yash) ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ʻರಾಮಾಯಣʼ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ಆದರೆ ರಾವಣನ ಪಾತ್ರಕ್ಕೆ ಯಶ್ ಬಣ್ಣ ಹಚ್ಚಲಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನಟ ಹಂಚಿಕೊಂಡಿಲ್ಲ.
ರಾಮಾಯಣಕ್ಕೆ ರಾಕಿ ಕೂಡ ನಿರ್ಮಾಪಕ
ʻರಾಮಾಯಣʼ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡುವುದಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ʻಮಾನ್ಸ್ಟರ್ ಮೈಂಡ್ ಕ್ರಿಯೇಷನ್ʼ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ʻಪ್ರೈಮ್ ಫೋಕಸ್ ಸ್ಟುಡಿಯೊʼ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ʻʻರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದೇನೆ. ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಯಶ್ ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆʼʼ ಎಂದರು.
ಇದನ್ನೂ ಓದಿ: Blast in Bengaluru: ಕೊನೆಗೂ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಬಾಂಬರ್! ಪ್ರಧಾನ ಸೂತ್ರಧಾರಿಯೂ ಎನ್‌ಐಎ ವಶಕ್ಕೆ
ಯಶ್ ಮಾತನಾಡಿ, ʻʻಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಕಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ಬ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆʼʼ ಎಂದರು.
ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.
ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.