Site icon Vistara News

Anchor Aparna: ಅಪರ್ಣಾ ಅಸ್ತಂಗತ : ಸ್ಯಾಂಡಲ್‌ವುಡ್‌ ತಾರೆಯರ ಭಾವುಕ ಮಾತುಗಳು!

Anchor Aparna Emotional words of Sandalwood stars

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ (Anchor Aparna) ಅವರು ಮೃತರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಜುಲೈ 11ರಂದು ನಿಧನರಾಗಿದ್ದಾರೆ. ಅಪರ್ಣಾ ನಿಧನಕ್ಕೆ ಇಡಿ ಸ್ಯಾಂಡಲ್‌ವುಡ್‌ ಸಂತಾಪ ಸೂಚಿಸಿದೆ. ರಾಗಿಣಿ, ಬಿಗ್ ಬಾಸ್ ಸಿರಿ, ಶ್ವೇತಾ ಚೆಂಗಪ್ಪ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಶ್ವೇತಾ ಚೆಂಗಪ್ಪ ಅವರು ʻʻಅಪರ್ಣಾ ಅಕ್ಕʼʼ ಎಂದು ನೋವಿನ ಸಾಲುಗಳನ್ನು ಬರೆದುಕೊಂಡಿದ್ದಾರೆ. ಮಜಾ ಟಾಕೀಸ್ ನಲ್ಲಿ ಶ್ವೇತಾ, ʻಅಪರ್ಣಾ ಅಕ್ಕ ತಂಗಿ ಪಾತ್ರದಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಂಡಿದ್ದರು.

ಶ್ವೇತಾ ಚೆಂಗಪ್ಪ ಬರೆದುಕೊಂಡಿದ್ದು ಹೀಗೆ ʻʻಅಪರ್ಣಾ ಅಕ್ಕ . ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ…
ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನ ವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ. ತುಂಬಾ ಬೇಗ ಹೊರಟ್ ಬಿಟ್ರಿ. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Anchor Aparna:  ಹೂವು-ಹಾರ ತರದಂತೆ ಮನವಿ ಮಾಡಿ, ಕವನದ ಮೂಲಕ ಅಪರ್ಣಾಗೆ ಭಾವುಕ ವಿದಾಯ ಹೇಳಿದ ಪತಿ!

ಇನ್ನು ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ʻʻನಮ್ಮದೇ ಬ್ಯಾನರ್‌ನ ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ನಟನೆ ಮಾಡಿದ್ದರು. ಅಪ್ಪುದು 100ಡೇಯ್ಸ್ ಸಿನಿಮಾ ಫಂಕ್ಷನ್ ಹೋಸ್ಟ್‌ ಮಾಡಿದ್ದರು. ಹಾಗೂ ನನನ್ನ ಮಗನ ಗ್ರಾಮಾಯಣ ಸಿನಿಮಾದಲ್ಲಿ ನಟಿಸಿದ್ದಾರೆ. ಶೂಟಿಂಗ್ ಟೈಂನಲ್ಲಿ ನೋಡಿದ್ದೆ. ಇಷ್ಟು ಬೇಗ ಅಗಲಿದ್ದು ತುಂಬಾ ನೋವು ಅನ್ನಿಸಿತು. ಭಾಷೆ ಅಂದ್ರೆ ಅವರ ಬಾಯಲ್ಲೇ ಕೇಳ್ಬೇಕು. ಅವರ ಬಗ್ಗೆ ನಮ್ಮ ಕುಟುಂಬಕ್ಕೆ ತುಂಬಾ ಗೌರವ ಇದೆʼʼಎಂದರು.

ಗಾಯಕಿ ವತ್ಸಲಾ ಮೋಹನ್ ಮಾತನಾಡಿ ʻʻ25 ವರ್ಷದ ಸ್ನೇಹ ನಮ್ಮದು. ಅಪರ್ಣಾ ಅವರಿಗೆ ಟೀ ಅಂದ್ರೆ ಪಂಚಪ್ರಾಣ. ಆಕೆ ಕ್ಯಾನ್ಸರ್ ವಿಚಾರ ಹೇಳಿಕೊಂಡಿಲ್ಲ. ಯಾಕೆ ಕೂದಲು ಕಟ್ ಮಾಡ್ಸಿದ್ದೀಯ ಎಂದು ಕೇಳಿದಕ್ಕೆ, ಡ್ಯಾಂಡ್‌ಡ್ರಫ್‌ ಜಾಸ್ತಿ ಆಗಿದೆ ಅಂತ ಸುಳ್ಳು ಹೇಳಿದ್ಲುʼʼಎಂದು ಹೇಳಿಕೊಂಡಿದ್ದಾರೆ.

ಮಂಡ್ಯ ರಮೆಶ್‌ ಮಾತನಾಡಿ ʻʻಕನ್ನಡ ಅಂದರೆ ಅಪರ್ಣ, ಅಪರ್ಣ ಅಂದ್ರೆ ಕನ್ನಡ. 5 ವರ್ಷಗಳ ಮಜಾ ಟಾಕೀಸ್ ನೆನಪು ಮಾತ್ರ. ಈ ಸುದ್ದಿ ನಿಜಕ್ಕೂ ಶಾಕ್‌. ಆಕೆಯ ಕನ್ನಡ ಭಾಷೆ ಹಾಗು ಮಾನವೀಯತೆ ನನಗೆ ಇಷ್ಟ ಶುದ್ಧ ಕನ್ನಡತಿಯನ್ನ ನಾವು ಕಳೆದುಕೊಂಡಿದ್ದೇವೆ. ಬರಿ ಗಂಡಸರು ಕಟ್ ಔಟ್ ಮಾತ್ರ ನಿಲ್ಲಬೇಕಾ? ಹೆಣ್ಣುಮಕ್ಕಳದ್ದು ಕಟ್ ಔಟ್ ನಿಲ್ಬೇಕು ಅಂತಿದ್ರು ಅಪರ್ಣ. ಅಪ್ಪನ ಸಾಧನೆ ಮೀರಿಸಿದ ಹೆಣ್ಣು ಅಪರ್ಣʼʼಎಂದರು.

ನಟಿ ತಾರಾ ಮಾತನಾಡಿ ʻʻಇದೊಂದು ಶಾಕಿಂಗ್ ನ್ಯೂಸ್. ಆರೋಗ್ಯ ಸರಿಯಿರಲಿಲ್ಲ ಅಂತ ಗೊತ್ತಿರಲಿಲ್ಲ. ಅಪರ್ಣಾರನ್ನ ಮೊದಲು ನೋಡಿದ್ದು ದೂರದರ್ಶನದಲ್ಲಿ. ಆಗ ಬೆರಗು ಕಣ್ಣಿನಲ್ಲಿ‌ ನೋಡಿದ್ವಿ. ಮಜಾ ಟಾಕೀಸ್ ನಲ್ಲಿ, ಅನೇಕ‌ ಕಾರ್ಯಕ್ರಮಗಳಲ್ಲಿ ಭೇಟಿ ಮಾಡಿದ್ವಿ. ಆಕೆ‌ ಕನ್ನಡ ನಿರರ್ಗಳ, ಅಭಿಮಾನ ಪೂರಕವಾಗಿ ಮಾತಾಡ್ತಿದ್ರು. ಇದು ನೋವಿನ ಬೇಜಾರಿನ ವಿಷಯ. ಅವರ ಆತ್ಮಕ್ಕೆ ಶಾಂತಿ‌ ಸಿಗಲಿʼʼಎಂದರು.

ಇದನ್ನೂ ಓದಿ: Anchor Aparna: `ನಮ್ಮ ಮೆಟ್ರೋ’ಗೆ ಅಪರ್ಣಾ ಧ್ವನಿ ಆಯ್ಕೆ ಆಗಿದ್ದು ಹೇಗೆ? ಅವರ ಮೊದಲ ಪ್ರಯಾಣದ ಕಥೆಯೇ ರೋಚಕ!

2005ರಲ್ಲಿ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ್ ವಸ್ತಾರೆ ಅವರನ್ನು ಅಪರ್ಣಾ ಮದುವೆ ಆದರು. ಈಗ ಪತ್ನಿಯನ್ನು ಕಳೆದುಕೊಂಡು ನಾಗರಾಜ್ ಕುಗ್ಗಿ ಹೋಗಿದ್ದಾರೆ. ‘ಮಧ್ಯಾಹ್ನ 12ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಮನೆಯ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ನಂತರ ಕುಟುಂಬದಿಂದ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ. ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version