Site icon Vistara News

Anchor Aparna:  ಹೂವು-ಹಾರ ತರದಂತೆ ಮನವಿ ಮಾಡಿ, ಕವನದ ಮೂಲಕ ಅಪರ್ಣಾಗೆ ಭಾವುಕ ವಿದಾಯ ಹೇಳಿದ ಪತಿ!

Anchor Aparna husband nagaraj vastarey requested people not bring garland emotional post

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (Anchor Aparna) ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಪರ್ಣಾ ಅವರ ನಿಧನದ ಬಗ್ಗೆ ಪತಿ ನಾಗರಾಜ್ ವಸ್ತಾರೆ ಫೇಸ್‌ಬುಕ್‌ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಜತೆಗೆ ಅಪರ್ಣಾ ಅವರ ವಿಡಿಯೊ ಹಾಗೂ ಒಂದು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಾಗರಾಜ್‌ ಹೂವು-ಹಾರ ತರಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಪರಿಸರ ಕಾಳಜಿ ತೋರಿದ್ದಾರೆ.

ಪತಿ ನಾಗರಾಜ್ ವಸ್ತಾರೆ ಅವರ ಭಾವುಕ ಪೋಸ್ಟ್‌ ಇದು

ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು

ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ

ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ

ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.

ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು

ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.

ಅಪರ್ಣಾ ವಸ್ತಾರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಸಿನಿಮಾ, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹೂವು-ಹಾರ ತರದಂತೆ ಮನವಿ

ಅಪರ್ಣಾ ಅವರ ವಿಡಿಯೊ ಹಾಗೂ ಒಂದು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಾಗರಾಜ್‌, ನಮಸ್ಕಾರ. ʻʻನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆʼʼ ಎಂದು ನಾಗರಾಜ್‌ ರಾಮಸ್ವಾಮಿ ವಸ್ತಾರೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Anchor Aparna: `ನಮ್ಮ ಮೆಟ್ರೋ’ಗೆ ಅಪರ್ಣಾ ಧ್ವನಿ ಆಯ್ಕೆ ಆಗಿದ್ದು ಹೇಗೆ? ಅವರ ಮೊದಲ ಪ್ರಯಾಣದ ಕಥೆಯೇ ರೋಚಕ!

ಪತ್ನಿ ಅಪರ್ಣ ನಿಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ʻʻಅವಳು ನನಗೆ ಸಲ್ಲುವುದಕ್ಕೆ ಮೊದಲೇನೆ ಇಡೀ ಕರ್ನಾಟಕಕ್ಕೆ ಸೇರಿದವಳು. ಅವಳ ಒಂದೇ ಒಂದು ಆಸೆ ಇತ್ತು. ಮಾಧ್ಯಮದವರ ಮುಂದೆ ನಿಂತು. ಏನಾಯ್ತು ಅಂತ ಹೇಳು ಅಂತ. ಅಷ್ಟನ್ನು ನಾನು ಎರಡು ಗಂಟೆಗಳ ಹಿಂದೆ ಫೇಸ್ ಬುಕ್ ಪೋಸ್ಟ್‌ನಲ್ಲಿ ಹೇಳಿದ್ದೇನೆ. ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂತ ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇಯ ಹಂತದಲ್ಲಿ ಇತ್ತು. ಅದನ್ನು ನೋಡಿದ ವೈದ್ಯರು ಇನ್ನು ಆರು ತಿಂಗಳು ಇದ್ದರೆ ಹೆಚ್ಚು ಅಂತ ಹೇಳಿದ್ರು. ಆದರೆ, ಅವಳು ಛಲಗಾತಿ. ಏನಾದರೂ ಮಾಡಿ ಗೆಲ್ತೀನಿ ಅನ್ನುವಂತಹ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಅಂತ ಇಟ್ಟುಕೊಳ್ಳೋಣ ಜನವರಿಯವರೆಗೂ ಹೋರಾಡಿದಳು. ಫೆಬ್ರವರಿಯಿಂದ ಸ್ವಲ್ಪ ಸೋತಳು. ಇದು ದೇಹವೇ ದೇಹವನ್ನು ಬಾಧಿಸುವ ಒಂದು ವ್ಯಾದಿ. ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಹೇರುವುದಕ್ಕೆ ಬಯಸುತ್ತೆ. ಅವಳು ಧೀರೆ. ಅವಳು ಇಷ್ಟು ವರ್ಷ ಮಣಿಸಿದಳು. ಆದರೆ ಆಗಲಿಲ್ಲ. ನಾವಿಬ್ಬರೂ ಜಂಟಿಯಾಗಿ ಇದರಲ್ಲಿ ಸೋತಿದ್ದೀವಿ ಅಂತ ನಿಮ್ಮ ಎದುರು ಹೇಳುವುದಕ್ಕೆ ಇಷ್ಟ ಪಡುತ್ತೇನೆʼʼಎಂದರು.

Exit mobile version