ಬೆಂಗಳೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ʻಅಣ್ಣಾಮಲೈʼ (Arbbie Movie) ನಟಿಸಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ ‘ಅರಬ್ಬಿ’ಯ ಟ್ರೈಲರ್ ಬಿಡುಗಡೆ ಆಗಿದೆ. ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಕನ್ನಡಿಗ ಕೆಎಸ್ ವಿಶ್ವಾಸ್ ಅವರ ಜೀವನದ ಬಗ್ಗೆ ಈ ಸಿನಿಮಾ ಇದೆ. ʻಅರಬ್ಬಿ’ ಸಿನಿಮಾದಲ್ಲಿ ವಿಶ್ವಾಸ್ ಅವರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ.
ಐಪಿಎಸ್ ಅಧಿಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಬಳಿಕ ಅಣ್ಣಾಮಲೈ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಇದೀಗ ʻಅರಬ್ಬಿ’ ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿದೆ. ‘ಅಣ್ಣಾಮಲೈ ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್ ಡೈಲಾಗ್ಗಳನ್ನು ಹೊಡೆದಿದ್ದಾರೆ. ಈ ಸಿನಿಮಾದಲ್ಲಿ ವಿಶ್ವಾಸ್ ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ.
ಕೆಎಸ್ ವಿಶ್ವಾಸ್, ವಿದ್ಯುತ್ ಅವಘಡವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಅಂತಾರಾಷ್ಟ್ರೀಯ ಈಜುಗಾರಾದರು. ವಿಶ್ವಾಸ್, ನೃತ್ಯಪಟು, ಜಿಮ್ನ್ಯಾಸ್ಟಿಕ್ ಸಹ ಬಲ್ಲರು. ಕೈಯಿಲ್ಲದಿದ್ದರೂ ಅಡುಗೆ ಮಾಡಬಲ್ಲರು. ಇದೀಗ ವಿಶ್ವಾಸ್ ಅವರ ಜೀವನ-ಸಾಧನೆ ‘ಅರಬ್ಬಿ’ ಹೆಸರಲ್ಲಿ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Ajith Kumar: ಅಜಿತ್ ಕುಮಾರ್ ಹೊಸ ಸಿನಿಮಾ ಅನೌನ್ಸ್: ಮೈತ್ರಿ ಮೂವೀ ಮೇಕರ್ಸ್ ಬಂಡವಾಳ!
‘ಅರಬ್ಬಿ’ ಸಿನಿಮಾವನ್ನು ಆರ್ ರಾಜ್ಕುಮಾರ್ ನಿರ್ದೇಶನ ಮಾಡಿದ್ದು, ಸಿಎಸ್ ಚೇತನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸಹ ನಿರ್ಮಾಣವನ್ನು ಅನಿತಾ ಸಿದ್ಧೇಶ್ವರ ಮಾಡಿದ್ದಾರೆ.
ಚಿತ್ರಕ್ಕೆ ಸರಿಗಮಪ ಖ್ಯಾತಿಯ ಗಾಯಕ ಕಂಬದ ರಂಗಯ್ಯ ಸಂಗೀತ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಎರಡು ಹಾಡುಗಳಿಗೆ. ರಾಜೇಶ್ ಕೃಷ್ಣನ್ ಹಾಗೂ ಚಂದನ್ ಶೆಟ್ಟಿ ಇವುಗಳನ್ನ ಹಾಡಿದ್ದಾರೆ. ಆನಂದ್ ದಿಂಡವಾರ ಕ್ಯಾಮರಾವರ್ಕ್ ಮಾಡಿದ್ದಾರೆ.