Site icon Vistara News

Bhavana Ramanna: ʼಹಂಸಗೀತೆʼಗೆ ಹೆಜ್ಜೆ ಹಾಕಲಿದ್ದಾರೆ ನಟಿ ಭಾವನಾ ರಾಮಣ್ಣ

hamsageetha

hamsageetha

ಬೆಂಗಳೂರು: ʼಚಂದ್ರಮುಖಿ ಪ್ರಾಣಸಖಿʼ ಸೇರಿದಂತೆ ಅನೇಕ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ (Bhavana Ramanna) ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಕನ್ನಡದ ಜನಪ್ರಿಯ ಕಾದಂಬರಿಕಾರ ತ.ರಾ.ಸುಬ್ಬರಾಯರ ‘ಹಂಸಗೀತೆ’ ಕಾದಂಬರಿಯನ್ನು ಜಿ.ವಿ.ಅಯ್ಯರ್ ಅವರು ಚಲನಚಿತ್ರವಾಗಿಸಿದ್ದರು. ಈಗ ನಟಿ ಭಾವನಾ ʼಹಂಸಗೀತೆʼಯನ್ನು ನೃತ್ಯ ರೂಪಕವಾಗಿ ವೇದಿಕೆ ಮೇಲೆ ತರುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಭಾವನಾ ರಾಮಣ್ಣ ತಮ್ಮ ಮನೆಯಲ್ಲೇ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಭಾವನಾ ಅವರ ಸಹೋದರ ಅರವಿಂದ್ ರಾಮಣ್ಣ, ಸಹೋದರಿ ಶ್ಯಾಲಿನಿ ರಾಮಣ್ಣ ಹಾಗೂ ಬರಹಗಾರ ವಿಕ್ರಂ ಹತ್ವಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾವು ಚಿತ್ರರಂಗಕ್ಕೆ ಬರಲು ಕಾರಣರಾದವರನ್ನು ನೆನೆದು ಭಾವುಕರಾಗಿ ಮಾತು ಆರಂಭಿಸಿದ ಭಾವನಾ, ಹಿಂದೆ ತಮ್ಮ “ಹೋಮ್ ಟೌನ್ ” ಬ್ಯಾನರ್‌ನಲ್ಲಿ ʼನಿರುತ್ತರʼ ಸಿನಿಮಾ ನಿರ್ಮಿಸಿದ್ದನ್ನು ನೆನಪಿಸಿಕೊಂಡರು. ಮುಂದೆ ಕೂಡ ಚಿತ್ರ ನಿರ್ಮಿಸುವ ಆಸೆ ಇದೆ ಎಂದರು. ʼಹೂವು ಫೌಂಡೇಶನ್ʼ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದಾಗಿಯೂ ಭಾವನಾ ಹೇಳಿದರು. ನಂತರ ʼಹಂಸಗೀತೆʼ ನೃತ್ಯ ರೂಪಕದ ಬಗ್ಗೆ ಮಾಹಿತಿ ನೀಡಿದರು. ʼʼತ.ರಾ.ಸು ಅವರ ʼಹಂಸಗೀತೆʼಯ ಬಗ್ಗೆ ಇವತ್ತಿನ ಪೀಳಿಗೆಗೆ ತಿಳಿಸಿಕೊಡಬೇಕು. ಹಾಗಾಗಿ ಈ ಪ್ರಯತ್ನ ಮಾಡುತ್ತಿದ್ದೇನೆ. ಜನವರಿ 30ರ ಸಂಜೆ 6.30ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವೀಣಾ ಮೂರ್ತಿ ಅವರ ನಿರ್ದೇಶನದಲ್ಲಿ ಈ ನೃತ್ಯ ಕಾವ್ಯ ಮೂಡಿ ಬರಲಿದೆʼʼ ಎಂದು ತಿಳಿಸಿದರು.

ಭಾವನಾ ಒಂದೂವರೆ ಗಂಟೆಗಳ ಕಾಲ ನಡೆಸಿಕೊಡುವ ಏಕ ವ್ಯಕ್ತಿ ಪ್ರದರ್ಶನದ ಈ ನೃತ್ಯ ಕಾವ್ಯದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳು ಇರುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಚಿತ್ರರಂಗದಿಂದ ಗುರುಗಳಾದ ಡಾ. ಬರಗೂರು ರಾಮಚಂದ್ರಪ್ಪ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ತಾರಾ ಅನುರಾಧಾ ಅವರನ್ನೂ ಆಹ್ವಾನಿಸಿರುವುದಾಗಿ ಭಾವನಾ ರಾಮಣ್ಣ ತಿಳಿಸಿದ್ದಾರೆ.

ಇದು ಮೊದಲ ಪ್ರಯತ್ನ. ಮುಂದೆ ಬೇರೆ ಬೇರೆ ಕಡೆಗಳಲ್ಲೂ ಈ ನೃತ್ಯ ಕಾವ್ಯವನ್ನು ಪ್ರದರ್ಶಿಸುವ ಯೋಜನೆ ಇದೆ ಯೋಜನೆಯಿದೆ ಎಂದೂ ವಿವರಿಸಿದ್ದಾರೆ.

ಇದನ್ನೂ ಓದಿ: Kichcha Sudeep: ಶ್ರೀರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ; ಕಿಚ್ಚನ ಟ್ವೀಟ್‌ ವೈರಲ್‌!

1996ರಲ್ಲಿ ತೆರೆಕಂಡ ʼಮಾರಿಬಲೆʼ ಎನ್ನುವ ತುಳು ಚಿತ್ರದ ಮೂಲಕ ಭಾವನಾ ಬಣ್ಣದ ಲೋಕಕ್ಕೆ ಕಾಲಿಟ್ಟರು. 1997ರಲ್ಲಿ ತೆರೆಕಂಡ ʼನೀ ಮುಡಿದ ಮಲ್ಲಿಗೆʼ ಇವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ. ಬಳಿಕ ಸ್ಯಾಂಡಲ್‌ವುಡ್‌ನ ಪ್ರಮುಖ ನಟಿಯ ಪೈಕಿ ಒಬ್ಬರು ಎನಿಸಿಕೊಂಡರು. 1999ರಲ್ಲಿ ʼಅನ್‌ಬುಲ್ಲ ಕಾದಲುಕ್ಕುʼ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001ರಲ್ಲಿ ರಿಲೀಸ್‌ ಆದ ʼಅಮ್ಮಯೆ ನವ್ವಿಟೆʼ ಭಾವನಾ ನಟಿಸಿರುವ ಮೊದಲ ತೆಲುಗು ಚಿತ್ರ. 2006ರಲ್ಲಿ ʼಫ್ಯಾಮಿಲಿʼ ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಟ್ಟರು. ಕಳೆದ ವರ್ಷ ʼಒಟ್ಟʼ ಮಲಯಾಳಂ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಸದ್ಯ ಭಾವನಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version