ಬೆಂಗಳೂರು: ‘ಕಹಿ’, ‘ಅಳಿದು ಉಳಿದವರು’ ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ಇದೀಗ ‘ಬಿಸಿ-ಬಿಸಿ ಐಸ್‌ಕ್ರೀಮ್’ (Bisi-Bisi Ice-Cream) ತಿನ್ನಿಸಲು ಮುಂದಾಗಿದ್ದಾರೆ. ಹೌದು, ಈ ವಿಭಿನ್ನ ಟೈಟಲ್‌ನ ಚಿತ್ರದ ಟ್ರೈಲರ್ ಅನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಲಾಗಿತು. ಈ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಅರವಿಂದ್ ಶಾಸ್ತ್ರಿ ಮಾತನಾಡಿ, ʼʼಕ್ಯಾಬ್ ಡ್ರೈವರ್ ವೃತ್ತಿ ಬಗ್ಗೆ ನಾವು ಹೇಳಲು ಹೊರಟಿಲ್ಲ. ಆ ವ್ಯಕ್ತಿಯ ಕಥೆಯನ್ನು ನಾವು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ಶೂಟಿಂಗ್ ಕಳೆದ ವರ್ಷ ಮುಗಿಸಿದ್ದೇವೆ. ಒಬ್ಬ ಒಂಟಿ ಕ್ಯಾಬ್ ಡ್ರೈವರ್ ಜೀವನದಲ್ಲಿ ನಿಗೂಢವಾಗಿ ಹುಡುಗಿ ಬಂದಾಗ ಆಗುವ ಅಡ್ವೆಂಚರ್ಸ್, ಮಿಸ್ ಅಡ್ವೆಂಚರ್ಸ್ ಅನ್ನು ಈ ಸಿನಿಮಾ ತಿಳಿಸಲಿದೆ. ಮಾರ್ಚ್‌ನಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆʼʼ ಎಂದು ತಿಳಿಸಿದರು.
ವಿಭಿನ್ನ ಪಾತ್ರ
ನಾಯಕ ಅರವಿಂದ್ ಐಯ್ಯರ್ ಮಾತನಾಡಿ, ʼʼನನ್ನದು ವಿಭಿನ್ನ ಪಾತ್ರ. ಈ ಪಾತ್ರಕ್ಕಾಗಿ ವರ್ಕೌಟ್ ಬಿಟ್ಟಿದ್ದೇನೆ. ಪ್ರತಿಭೆ ಅನಾವರಣಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ. ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನ ಸಾಕಷ್ಟು ತಯಾರಿ ನಡೆಸಿದ್ದೆವು. ಬಹಳ ಉತ್ಸಾಹದಿಂದ ಕೆಲಸ ಮಾಡಿದ್ದೇನೆʼʼ ಎಂದರು.
ಕಾಮಿಡಿ, ಥ್ರಿಲ್ಲರ್
ನಾಯಕಿ ಸಿರಿ ರವಿಕುಮಾರ್ ಮಾತನಾಡಿ, ʼʼನಾನು ಅರವಿಂದ್ ಶಾಸ್ತ್ರಿ ಅವರ ಜತೆ ʼಕಹಿʼ ಸಿನಿಮಾ ಸಮಯದಲ್ಲಿ ಮಾತನಾಡಿದ್ದೆ. ನಾನು ಆಗ ರೆಡಿಯೋ ಮಿರ್ಚಿಯಲ್ಲಿದ್ದೆ. ಕೆಲಸದಲ್ಲಿ ಬ್ಯುಸಿ ಇದ್ದೆ. ಬಹಳ ವರ್ಷಗಳ ನಂತರ ಕಾಲ್ ಮಾಡಿದಾಗ ಖುಷಿಪಟ್ಟೆ. ಇವರ ʼಕಹಿʼ ಮತ್ತು ʼಅಳಿದು ಉಳಿದವರುʼ ಸಿನಿಮಾ ನನಗೆ ಇಷ್ಟ. ಕಾಮಿಡಿ, ಥ್ರಿಲ್ಲರ್, ಅಡ್ವೆಂಚರ್ ಎಲ್ಲವೂ ‘ಬಿಸಿ-ಬಿಸಿ ಐಸ್‌ಕ್ರೀಮ್’ ಸಿನಿಮಾದ ಕಥೆಯಲ್ಲಿದೆ. ಹೀಗಾಗಿ ಇದನ್ನು ಮಾಡಲು ಒಪ್ಪಿಕೊಂಡೆ. ಚಿತ್ರೀಕರಣ ಮಜವಾಗಿತ್ತು. ಸಿನಿಮಾ ನೋಡಿದಾಗ ಖುಷಿ ಎನಿಸಿತುʼʼ ಎಂದು ತಮ್ಮ ಅನುಭವ ವಿವರಿಸಿದರು.
ಕಥೆ ಏನು?
ಕ್ಯಾಬ್ ಡ್ರೈವರ್ ಕಥೆ ಹೇಳುವ ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಬಿಸಿಬಿಸಿ ಐಸ್‌ಕ್ರೀಮ್ ಚಿತ್ರ ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ ಏನಾಗುತ್ತದೆ? ಅವಳು ಅವನ ದುಃಖಗಳಿಗೆ ಔಷಧ ಮತ್ತು ಅನೇಕ ಸಾಹಸಗಳಿಗೆ ಹೇಗೆ ನಾಂದಿಯಾಗುತ್ತಾಳೆ ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರಿ ಸಿನಿಮಾ ಮಾಡಿದ್ದಾರೆ. ಕಥೆ ಬರೆದು ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ಸಂಕಲನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ: Gajarama Movie: ’ಗಜರಾಮ’ ಟೀಸರ್ ಔಟ್; ಆ್ಯಕ್ಷನ್ ಮೂಡ್‌ನಲ್ಲಿ ರಾಜವರ್ಧನ್
ತಾರಾಗಣ, ತಂತ್ರಜ್ಞರ ತಂಡ
ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಐಯ್ಯರ್-ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಚಿತ್ರಕ್ಕಿದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ನಡಿ ಅಕ್ಷರ ಭಾರಧ್ವಾಜ್ ‘ಬಿಸಿ-ಬಿಸಿ ಐಸ್‌ಕ್ರೀಮ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ