ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ಜನುಮದಿನದಂದು ಸಾಲು ಸಾಲು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಬರೋಬ್ಬರಿ ಒಂಭತ್ತು ಸಿನಿಮಾಗಳು ದರ್ಶನ್ ಅವರ ಕೈಯಲ್ಲಿ ಇದೆ ಎನ್ನಲಾಗಿದೆ. ಇದೀಗ 21 ವರ್ಷದ ಬಳಿಕ ದರ್ಶನ್ ಹಾಗೂ ಪ್ರೇಮ್ ಒಂದಾಗುತ್ತಿದ್ದಾರೆ. ‘ಕರಿಯ’ ಅಂಥಹಾ ಸೂಪರ್-ಡೂಪರ್ ಹಿಟ್ ಸಿನಿಮಾ ಕೊಟ್ಟ ಬಳಿಕ ಈ ನಟ-ನಿರ್ದೇಶಕ ಜೋಡಿ ಒಂದಾಗಿರಲಿಲ್ಲ. ದರ್ಶನ್ ಹುಟ್ಟುಹಬ್ಬದ ದಿನವಾದ ಇಂದು (ಫೆಬ್ರವರಿ 16) ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ.
ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾದ ಘೋಷಣೆಯನ್ನು ಪ್ರೋಮೊ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಮಾಡಿದೆ. ಪ್ರೋಮೊ ನೋಡಿದವರಿಗೆ ಈ ಸಿನಿಮಾ ಪೌರಾಣಿಕ ಕಥೆ ಆಧರಿತವಾಗಿರಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಆಂಜನೇಯ ಗದೆ ಜತೆ ‘ನನ್ನ ಕೊನೆ ಉಸಿರಿರೋವರೆಗೂ ಈ ಭೂಮಿ ಮೇಲೆ, ನಿನ್ನ ಒಂದ್ ಹನಿ ರಕ್ತಾನೂ ಸೋಕೋದಕ್ಕೆ ನಾನ್ ಬಿಡಲ್ಲ’ ಎಂದು ದರ್ಶನ್ರ ಹಿನ್ನೆಲೆ ಧ್ವನಿ ಕೇಳಿ ಬರುತ್ತದೆ. ಹಿನ್ನೆಲೆಯಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಕೇಳಿ ಬರುತ್ತದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಿಂದ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದ ಇತರೆ ಪಾತ್ರವರ್ಗ, ತಂತ್ರಜ್ಞರ ಘೋಷಣೆ ಇನ್ನಷ್ಟೆ ಆಗಬೇಕಿದೆ. ಈ ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆ ಎಂದು ಪ್ರೋಮೊನಲ್ಲಿ ಹೇಳಲಾಗಿದೆ.
ಸಾಲು ಸಾಲು ಸಿನಿಮಾಗಳು ಅನೌನ್ಸ್!
ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ದರ್ಶನ್ ಅವರ ಕಾಂಬಿನೇಶನ್ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಇದರಲ್ಲಿ ಐತಿಹಾಸಿಕ ಕಥಾಹಂದರ ಇರಲಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರು ನಿರ್ಮಾಣದ D 59 ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.ದರ್ಶನ್ ಅವರಿಗೆ ಐತಿಹಾಸಿಕ ಸಿನಿಮಾ ಮಾಡುವುದೆಂದರೆ ಅಚ್ಚು ಮೆಚ್ಚು. ಈ ಮೊದಲು ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದ ದರ್ಶನ್ ಅವರು ಈಗ ಸಿಂಧೂರ ಲಕ್ಷ್ಮಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಕಥೆ ಇರಲಿದೆ. ದರ್ಶನ್ ನಟನೆಯ 59ನೇ ಸಿನಿಮಾವಾಗಿ ಈ ಚಿತ್ರ ಮೂಡಿಬರಲಿದೆ.
ಇದನ್ನೂ ಓದಿ: Challenging Star Darshan: `ಸಿಂಧೂರ ಲಕ್ಷ್ಮಣ’ನಾಗಿ ಮಿಂಚಲಿದ್ದಾರೆ ದರ್ಶನ್; ಸಾಲು ಸಾಲು ಸಿನಿಮಾಗಳು ಅನೌನ್ಸ್!
‘ಈ ಮೊದಲು ದರ್ಶನ್ ನಟಿಸಿದ್ದ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾಗಳಿಗೆ ‘ಮೀಡಿಯಾ ಹೌಸ್ ಸ್ಟುಡಿಯೋ’ ಸಂಸ್ಥೆಯ ಮೂಲಕ ಶೈಲಜಾ ನಾಗ್ ಮತ್ತು ಬಿ. ಸುರೇಶ್ ಅವರು ಬಂಡವಾಳ ಹೂಡಿದ್ದರು. ಈಗ ಮೂರನೇ ಬಾರಿಗೆ ಅವರು ದರ್ಶನ್ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ.
ಇದರ ಹೊರತಾಗಿ ದರ್ಶನ್ ಅವರ ಜತೆ ʻಅಂಬರೀಶʼ ಸಿನಿಮಾ ಮಾಡಿದ್ದ ಮಹೇಶ್ ಸುಖಧರೆ ಕೂಡ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರವೊಂದನ್ನ ಘೋಷಿಸಿದ್ದಾರೆ. ಸಚ್ಚಿದಾನಂದ ಇಂಡುವಾಳ ಹೊಸ ಚಿತ್ರ ಘೋಷಿಸಿದ್ದಾರೆ, ಇದನ್ನು ತರುಣ್ ಸುಧೀರ್ ಅವರೇ ನಿರ್ದೇಶಿಸುತ್ತಿರುವುದು ವಿಶೇಷ. ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ.ಮಂಜುನಾಥ್, ರಘುನಾಥ್ ಸೋಗಿ, ದರ್ಶನ್ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿಯನ್ನ ತೋರಿಸಿರುವ ಉಳಿದ ನಿರ್ಮಾಪಕರು. ಇವರ ಚಿತ್ರಕ್ಕೆ ಯಾರು ನಿರ್ದೇಶಕರು ಯಾರೆಂಬುದು ತಿಳಿದು ಬಂದಿಲ್ಲ.