ಬೆಂಗಳೂರು: ನಟ ದರ್ಶನ್ ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆ.20ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ದರ್ಶನ್‌ಗೆ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ಇಂದು (ಆಗಸ್ಟ್ 1) ಈ ಕೇಸ್ನ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಹೆಸರು ಹೇಳಿ ಹಾಜರಾತಿ ಪಡೆದ ನ್ಯಾಯಾಧೀಶರು ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದ್ದಾರೆ. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪರಪ್ಪನ ಆಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ ನಾಲ್ವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ನಟ ದರ್ಶನ್‌ಗೆ ಆ. 20ರವರೆಗೆ ಜೈಲೂಟವೇ ಫಿಕ್ಸ್
ನಟ ದರ್ಶನ್ ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆ.20ಕ್ಕೆ ಮುಂದೂಡಿದೆ. ಹೀಗಾಗಿ ಇನ್ನೂ 21 ದಿನ ದರ್ಶನ್‌ಗೆ (Actor Darshan) ಜೈಲೂಟವೇ ಗತಿಯಾಗಿದೆ. ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಸರ್ಕಾರ ಮತ್ತು ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಕರ್ನಾಟಕ ಕಾರಾಗೃಹಗಳ ಕಾಯ್ದೆ ಓದುತ್ತಾ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ ಅವರು, ಮ್ಯಾನ್ಯುವಲ್ ಪ್ರಕಾರ ವಿಚಾರಣಾಧೀನ ಕೈದಿಗೆ ಸ್ವಂತ ಖರ್ಚಿನಲ್ಲಿ ಖಾಸಗಿ ಊಟ ಪಡೆಯೋದಕ್ಕೆ ಅವಕಾಶ ಇದೆ. ಅಧೀನ ನ್ಯಾಯಾಲಯ ಇಲ್ಲಿ ಆ್ಯಕ್ಟ್‌ಗಿಂತ ಮ್ಯಾನ್ಯುಯಲ್ ಬಗ್ಗೆ ಪರಿಗಣಿಸಿದೆ. ಕರ್ನಾಟಕ ಪ್ರಿಸನ್ಸ್ ಆ್ಯಕ್ಟ್ 1963 ಅನ್ನು ಪರಿಗಣಸಿಯೇ ಇಲ್ಲ. ಸೆಕ್ಷನ್ 30ರಡಿಯಲ್ಲಿ ಮನೆ ಊಟ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?
ಇನ್ನು ದರ್ಶನ್‌ಗೆ ಅನಾರೋಗ್ಯವಾಗಿರುವ ಬಗ್ಗೆ ವರದಿ ಇದೆ. ಜೈಲಿನ ಮುಖ್ಯ ಆರೋಗ್ಯಾಧಿಕಾರಿ ವರದಿ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಕ್ಕೆ, ಪ್ರತಿ ವಿಚಾರಣಾಧೀನ ಕೈದಿಯೂ ಈ ಸಮಸ್ಯೆ ಎದುರಿಸುತ್ತಾರೆ. ಅವರು ಮನುಷ್ಯರೇ ಅಲ್ಲವೇ ಎಂದು ಜಡ್ಜ್ ಪ್ರಶ್ನೆ ಮಾಡಿದರು. ನ್ಯೂಟ್ರಿಷನ್ ಕೊರತೆ ಇದ್ದರೆ ಜೈಲಿನ ವೈದ್ಯಾಧಿಕಾರಿ ಪ್ರಿಸ್ಕ್ರಿಪ್ಷನ್ ನೀಡುತ್ತಾರೆ ಎಂದು ಹೇಳಿದರು. ಡಾಕ್ಟರ್ ಏನು ಹೇಳುತ್ತಾರೋ ಅದನ್ನು ಜೈಲಿನಲ್ಲಿ ನೀಡಲಾಗುತ್ತದೆ. ಸೆಕ್ಷನ್ 30ರ ಬಗ್ಗೆ ಹೇಳಲು ಅವಕಾಶ ಇದೆ. ಆದರೆ ಮನೆ ಊಟದ ಬಗ್ಗೆ ಯಾಕೆ ಎಂದು ಜಡ್ಜ್ ಪ್ರಶ್ನಿಸಿದರು.
ಈ ವೇಳೆ ವೈದ್ಯಾಧಿಕಾರಿಗಳು, ದರ್ಶನ್ ಅನಾರೋಗ್ಯದ ಬಗ್ಗೆ ವರದಿಯನ್ನು ನೀಡಿದ್ದಾರೆ ಎಂದು ಪ್ರಭುಲಿಂಗ ನಾವದಗಿ ಉತ್ತರಿಸಿ, ಜೈಲಿನ ಮುಖ್ಯ ಆರೋಗ್ಯ ಅಧಿಕಾರಿಯ ವೈದ್ಯಕೀಯ ವರದಿ ಸಲ್ಲಿಸಿದರು. ಡಾಕ್ಟರ್ ಇದಕ್ಕಾಗಿಯೇ ಸ್ಪೆಸಿಫಿಕ್ ಆಗಿ ಹೇಳಿರಬೇಕು ಅಲ್ವಾ? ಆಗ ಮಾತ್ರ ಪರಿಗಣನೆಗೆ ಅವಕಾಶ ಇದೆ ಎಂದು ಜಡ್ಜ್ ಹೇಳಿದರು.