ಬೆಂಗಳೂರು: ‘ಶಿವ 143’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಧೀರೇನ್ ರಾಮ್‌ಕುಮಾರ್ (Dheeren Ramkumar) ಮೊದಲ ಪ್ರಯತ್ನದಲ್ಲಿ ಸೋತಿದ್ದರು. ಎರಡು ವರ್ಷದ ಹಿಂದೆ ಬಂದಿದ್ದ ‘ಶಿವ 143’ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೀಗ ಹೊಸ ಸಿನಿಮಾ ಸಾಹಸಕ್ಕೆ ಧೀರೇನ್ ಮುಂದಾಗಿದ್ದಾರೆ. ಧೀರೇನ್ ರಾಮ್‌ಕುಮಾರ್ ಎನ್ನುವ ತಮ್ಮ ಹೆಸರನ್ನು ʻಧೀರೇನ್ ರಾಜ್‌ಕುಮಾರ್ʼ (Dheeren Rajkumar)ಎಂದು ಬದಲಿಸಿಕೊಂಡಿದ್ದಾರೆ. ಅಂದರೆ ತಂದೆ ಹೆಸರಿನ ಬದಲಿಗೆ ತಾತನ ಹೆಸರಿನೊಟ್ಟಿಗೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೊಸ ಸಿನಿಮಾ ಮೂಲಕ ಹೊಸ ಜರ್ನಿ ಎಂದಿದ್ದಾರೆ.
ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ ಆಗಿ ಕೆ.ಆರ್.ಜಿ. ಸ್ಟುಡಿಯೋಸ್ ಮರುಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನು ಕೂಡ ಕೆ.ಆರ್.ಜಿ ಘೋಷಿಸಿದೆ. ಚಿತ್ರದ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಹೇಳಿಕೊಂಡಿದೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. “ರತ್ನನ್ ಪ್ರಪಂಚ” ಮೂಲಕ ರೋಹಿತ್ ಪದಕಿ, “ಪೌಡರ್” ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, “ಗುರುದೇವ್ ಹೊಯ್ಸಳ” ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದೆ.
ಈ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ. ಪ್ರಸ್ತುತವಾಗಿ ಬಹು ನಿರೀಕ್ಷಿತ “ಉತ್ತರಕಾಂಡ” ಚಿತ್ರ ಸೆಟ್ಟೇರಿದ್ದು, “ಪೌಡರ್” ಚಿತ್ರದ ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ವರನಟ ರಾಜಕುಮಾರ್ ಪುತ್ರಿ ಪೂರ್ಣಿಮಾ ಮಗ ಧೀರೇನ್ ರಾಮ್‌ಕುಮಾರ್ (ಧೀರೇನ್ ರಾಜ್‌ಕುಮಾರ್ʼ).
ಇದನ್ನೂ ಓದಿ: Shiva 143 | ಧೀರೇನ್ ರಾಮ್‌ಕುಮಾರ್ ಚಿತ್ರ ಶಿವ 143 ರಾಜ್ಯಾದ್ಯಂತ ಬಿಡುಗಡೆ : ಅಪ್ಪು ಕಟೌಟ್ ಮುಖ್ಯ ಆಕರ್ಷಣೆ!
ʻʻಶಿವ 143ʼʼ ಸಿನಿಮಾ
ತೆಲುಗಿನ ‘RX100’ ಸಿನಿಮಾ ರೀಮೇಕ್ ಆಗಿದ್ದ ‘ಶಿವ 143’ ಚಿತ್ರಕ್ಕೆ ಅರ್ಜುನ್ ಜನ್ಯಾ ಟ್ಯೂನ್ ಹಾಕಿದ್ದರು. ಅವಿನಾಶ್, ಚರಣ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಶೋಭರಾಜ್ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು.
ಈ ಚಿತ್ರ ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿತ್ತು. ಛಾಯಾಗ್ರಹಣ ಜವಾಬ್ದಾರಿಯನ್ನು ಶಿವ ಹೊತ್ತಿದ್ದರು. ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ಚಿತ್ರ ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.
ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದರು. ಚರಣ್ ರಾಜ್ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಸಾಧುಕೋಕಿಲ ಹಾಗೂ ಚಿಕ್ಕಣ್ಣ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು
ಧೀರೇನ್ ಸಹೋದರಿ ಧನ್ಯಾ ರಾಮ್‌ಕುಮಾರ್ ಕೂಡ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಧನ್ಯಾ ಬಳಿಕ ‘ಹೈಡ್ ಅಂಡ್ ಸೀಕ್’, ‘ಕಾಲಾಪತ್ಥರ್’, ‘ಎಲ್ಲಾ ನಿನಗಾಗಿ’ ಸಿನಿಮಾಗಳಲ್ಲಿ ನಟಿಸಿದರು.