ಬೆಂಗಳೂರು: ಭಾರತದ (Dhruva Sarja) ಮೊಟ್ಟಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ರೆಸ್ ಮೀಟ್ ಹಾಗೂ ಟ್ರೈಲರ್ ಲಾಂಚ್ ಇವೆಂಟ್ ಮುಂಬಯಿ ಜೋಗೇಶ್ವರಿ ಏರಿಯಾದ ಇನ್ ಫಿನಿಟಿ ಮಾಲ್ ಪಿವಿಆರ್ ಥಿಯೇಟರಿನಲ್ಲಿ ನಡೆಯಿತು. ಆ ಹಿರಿಮೆಗೆ ಕಾರಣವಾಗಿದ್ದು ʻಮಾರ್ಟಿನ್ʼ ಚಿತ್ರ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಅಲ್ಲದೆ ಕೆನಡಾ, ಕೀನ್ಯಾ, ಯುಕೆ, ದುಬೈ, ಜಪಾನ್ ಸೇರಿದಂತೆ ಪ್ರಪಂಚದ 21 ದೇಶಗಳಿಂದ ಆಗಮಿಸಿದ ನೂರಾರು ಪತ್ರಕರ್ತರು ಈ ಬೃಹತ್ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಧ್ರುವ ಸರ್ಜಾ, ಅರ್ಜುನ್ ಸರ್ಜಾ, ನಿರ್ಮಾಪಕ ಉದಯ್ ಕೆ.ಮೆಹ್ತಾ, ನಿರ್ದೇಶಕ ಎ.ಪಿ.ಅರ್ಜುನ್, ನಾಯಕಿಯರಾದ ಅನ್ವೇಶಿ ಜೈನ್, ವೈಭವಿ ಶಾಂಡಿಲ್ಯ ವೇದಿಕೆಯಲ್ಲಿದ್ದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಉದಯ್ ಕೆ. ಮೆಹ್ತಾ ʻʻಹೊಸ ರೀತಿಯ ಕಾನ್ಸೆಪ್ಟ್, ನಿರೂಪಣೆ ನನಗೆ ಈ ಚಿತ್ರ ಮಾಡಲು ಪ್ರೇರಣೆಯಾಯ್ತು. ಆರು ತಿಂಗಳ ಹಿಂದೆ ಈ ಚಿತ್ರವನ್ನು ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕೆಂಬ ಆಲೋಚನೆ ಬಂತು. ಅದಕ್ಕೆ ಸರಿಯಾಗಿ ಎಲ್ಲಾ ಕಡೆಯಿಂದ ಬೇಡಿಕೆಯೂ ಬಂತು. ಮೊದಲು 5 ಭಾಷೆ ಮಾಡಬೇಕೆಂಬ ಯೋಜನೆ ಮಾತ್ರ ಇತ್ತು. ಸಿನಿಮಾ ಆಗ್ತಾ ಆಗ್ತಾ ಅದು ಪ್ರಪಂಚದ ಸಿನಿಮಾ ಆಯ್ತುʼʼ ಎಂದರು.
ಅರ್ಜುನ್ ಸರ್ಜಾ ಮಾತನಾಡಿ ʻʻನಾನೂ ಸಹ 44 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಮೊದಲಬಾರಿಗೆ ಈ ಥರದ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿರೋದು. ಇದಕ್ಕೆ ಮಾರ್ಟಿನ್ ತಂಡ ಕಾರಣ. ಧ್ರವ ತನ್ನ ಐದನೇ ಚಿತ್ರದಲ್ಲೇ ಮ್ಯಾಜಿಕ್ ಮಾಡಿದ್ದಾನೆ. ಆತನಿಂದ ಪ್ರೇಕ್ಷಕರು ತುಂಬಾ ಬಯಸುತ್ತಿದ್ದಾರೆ. ನಾನು ಕೂಡ ಈತನಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಆತನೇ ನನಗೆ ಇನ್ಸ್ ಪಿರೇಷನ್, ಉದಯ್ ಮೆಹ್ತಾ ತುಂಬಾ ಪ್ಯಾಷನೇಟೆಡ್ ನಿರ್ಮಾಪಕರು. ಅವರಿಗೆ ಈ ಸಿನಿಮಾದಿಂದ ಅವಾರ್ಡ್, ರಿವಾರ್ಡ್ ಎರಡೂ ಸಿಗುವಂತಾಗಲಿʼʼ ಎಂದರು.
ಇದನ್ನೂ ಓದಿ: Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?
ಧ್ರುವ ಸರ್ಜಾ ಮಾತನಾಡಿ ʻʻರಾಜ್ಯ ದೇಶ ಎನ್ನದೆ ಎಲ್ಲಾ ಭಾಗದ ಜನರಿಗೂ ಅರ್ಥವಾಗುವಂಥ ಯೂನಿಕ್ ಸ್ಟೋರಿ ಚಿತ್ರದಲ್ಲಿದೆ. ಯೂನಿವರ್ಸಲ್ ಥೀಮ್ ಆಗಿರೋದ್ರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತದೆ, ಅರ್ಥವಾಗುತ್ತದೆ.
ಸಸ್ಪೆನ್ಸ್, ಥ್ರಿಲ್ಲರ್, ಬಿಗ್ ಆಕ್ಷನ್ ಜೊತೆಗೆ ಸಣ್ಣ ಡ್ರಾಮಾ ಇದರಲ್ಲಿದೆ. ಕ್ಲೈಮ್ಯಾಕ್ಸ್ ಭಾಗದ ಆಕ್ಷನ್ ಮಾಡುವುದು ನನಗೆ ತುಂಬಾ ಚಾಲೆಂಜ್ ಆಗಿತ್ತು. ಇದು ದೇಶಪ್ರೇಮಿಯೊಬ್ಬನ ಸಾಹಸದ ಕಥೆʼʼ ಎಂದು ಹೇಳಿದರು.
ನಾಯಕಿ ವೈಭವಿ ಮಾತನಾಡಿ ʻʻ7 ವರ್ಷಗಳಿಂದ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಕಿ ನಟಿಸಿದ್ದೇನೆ. ಮಾರ್ಟಿನ್ ಈಸ್ ಒನ್ ಆಫ್ ದ ಬಿಗ್ಗೆಸ್ಟ್ ಮೂವಿ ಇನ್ ಮೈ ಕರಿಯರ್. ಧ್ರುವ ತೆರೆಮೇಲೆ ಎಷ್ಟು ಅರ್ಭಟಿಸಿದ್ದಾರೋ, ಹಾರ್ಟ್ಲಿ ಅವರು ಅಷ್ಟೇ ಸಾಫ್ಟ್. ಅಲ್ಲದೆ ಇಂಥ ಸಿನಿಮಾ ಮಾಡಲು ಗಟ್ಟಿ ಗುಂಡಿಗೆ ಇರಬೇಕು.. ಅದಿದ್ದವರೇ ಇಂಥ ಸಿನಿಮಾ ಮಾಡಲು ಸಾಧ್ಯʼʼ. ಎಂದರು.
ಎ.ಪಿ. ಅರ್ಜುನ್ ಮಾತನಾಡಿ ʻʻನಾನು ಮಂಡ್ಯದ ಹುಡುಗ ಫಸ್ಟ್ ಸಿನಿಮಾ ಅಂಬಾರಿ, ಅದ್ದೂರಿ ಚಿತ್ರದ ಮೂಲಕ ಧ್ರುವ ನನ್ನು ಪರಿಚಯಿಸಿದೆ. ಆರಂಭದಲ್ಲಿ ನಾರ್ಮಲ್ ಸಿನಿಮಾ ಅಂತಲೇ ಪ್ರಾರಂಭಿಸಿದೆವು. 20 ದಿನಗಳ ಶೂಟಿಂಗ್ ಆದಮೇಲೆ ಇದರಲ್ಲೇನೋ ಇದೆ ಅಂತ ಪ್ಯಾನ್ ಸಿನಿಮಾ ಪ್ಲಾನ್ ಮಾಡಿದೆವು. ಇಂಥ ಸಿನಿಮಾ ಮಾಡಬೇಕು ಅಂತ ಬಂದಾಗ ನಿರ್ಮಾಪಕರೂ ಮುಖ್ಯವಾಗುತ್ತಾರೆ. ಆ ವಿಷಯದಲ್ಲಿ ಮೆಹತಾ ಅವರ ಧೈರ್ಯ ಮೆಚ್ಚಲೇಬೇಕು. ಸರ್ಜಾ ಸಿನಿಮಾಗಳಲ್ಲಿ ದೇಶಾಭಿಮಾನ ಎದ್ದು ಕಾಣುತ್ತದೆ. ಇದರಲ್ಲಿ ಅದು ಹತ್ತರಷ್ಟು ಎದ್ದು ಕಾಣುತ್ತೆʼʼ ಎಂದರು.
ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್ ಪಾಠಕ್ ಸಹ ‘ಮಾರ್ಟಿನ್’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.