ಬೆಂಗಳೂರು: ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್ (Actor Darshan) ಹಾಗೂ ತಮ್ಮ ನಡುವಿನ ಎದ್ದು ತೋರಿದ ಮನಸ್ತಾಪದ ವಿಚಾರವನ್ನು ಧ್ರುವ ಸರ್ಜಾ (Dhruva Sarja) ತಮ್ಮ ಬರ್ತ್‌ಡೇ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ್ದರು. ದರ್ಶನ್ ಅವರ ಬಳಿ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದು ಹೇಳಿಕೆ ನೀಡಿದ್ದರು. ಧ್ರುವ ಅವರಿಗೆ ಈ ಹಿಂದೆ ದರ್ಶನ್ ಪ್ರಕರಣದ ಬಗ್ಗೆ ಕೇಳಿದಾಗ ಉತ್ತರಿಸಿರಲಿಲ್ಲ. ಇದೀಗ ಮಾಧ್ಯಮವೊಂದಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಧ್ರುವ ಸರ್ಜಾ ಮಾತನಾಡಿ ʻʻಯಾರೋ ಲೋ ಆಗಿದ್ದಾರೆ, ಕುಗ್ಗಿದ್ದಾರೆ ಎಂದು ಏನೇನೋ ಮಾತನಾಡಬಾರದು. ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮದೂ ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ. ಅವರ ಕುಟುಂಬಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು. ಕಾನೂನು ಎಲ್ಲಕ್ಕಿಂತ ದೊಡ್ಡದು. ಸುಮ್ಮನೇ ನಾವು ಏನೇನೋ ಮಾತನಾಡಬಾರದು.’ ಎಂದಿದ್ದಾರೆ.
ದರ್ಶನ್ ಅರೆಸ್ಟ್ ಆದ ಬೆನ್ನಲ್ಲಿಯೇ ಮಾಧ್ಯಮದವರು, ಧ್ರುವ ಅವರಲ್ಲಿ ಈ ಪ್ರಕರಣದ ಕುರಿತು ಮಾತನಾಡುವಂತೆ ಮನವಿಯನ್ನ ಮಾಡಿಕೊಂಡಿದ್ದರು. ಧ್ರುವಾ ಸರ್ಜಾ ಪ್ರಶ್ನೆ ಕೇಳಿಯೂ ಕೇಳಿಸದಂತೆ ಹೋದರು. ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ʻಕೆಡಿʼ ಹಾಗೂ ʻಮಾರ್ಟಿನ್ʼ ಸಿನಿಮಾಗಳು ರಿಲೀಸ್ ಆಗುತ್ತಿವೆ. ಜತೆಗೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು ಡಿಸೆಂಬರ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ದರ್ಶನ್ ಸಿನಿಮಾ ‘ಡಿವಿಲ್’ ಕೂಡ ಬಿಡುಗಡೆಯಾಗಲಿದೆ ಎಂದು ಘೋಷಣೆ ಆಗಿತ್ತು. ಆದರೆ ದರ್ಶನ್ ಜೈಲಿನಲ್ಲಿ ಇರುವುದರಿಂದ ಡೆವಿಲ್ ಈ ವರ್ಷ ಬರಲು ಸಾಧ್ಯವೇ ಇಲ್ಲ.
ಇದನ್ನೂ ಓದಿ: Dhruva Sarja: 3 ವರ್ಷವಾದರೂ ʻಮಾರ್ಟಿನ್ʼ ಸಿನಿಮಾ ರಿಲೀಸ್ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?
ಧ್ರುವ ಮತ್ತು ದರ್ಶನ್ ನಡುವೆ ಇರುವ ಮನಸ್ತಾಪ ಏನು?
ಕಾವೇರಿಗಾಗಿ ಇಡೀ ಕನ್ನಡ ಚಿತ್ರರಂಗ ಒಂದೇ ವೇದಿಕೆಯನ್ನೇರಿದ್ದ ಸಮಯದಲ್ಲಿ ದರ್ಶನ್ ಮುಖವನ್ನ ಧ್ರುವ ಒಮ್ಮೆಯೂ ನೋಡಿರಲಿಲ್ಲ. ದರ್ಶನ್ ಬಂದಾಗ ಎಲ್ಲರೂ ಎದ್ದು ನಿಂತರೂ ಧ್ರುವ ಮಾತ್ರ ಕುರ್ಚಿಯಿಂದ ಕದಲಿರಲಿಲ್ಲ.
ಈ ಬಗ್ಗೆ ಧ್ರುವ ಮಾತನಾಡಿ ʻʻದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು. ನನಗೂ ಸ್ವಾಭಿಮಾನ ಇದೆ, ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳುವುದು ಇಷ್ಟೇ, ನನ್ನಲ್ಲಿರುವ ಕೆಲವು ಗೊಂದಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಮನಸಲ್ಲೊಂದು ಹೊರಗೊಂದು ಥರ ಇರುವುದು ನನಗೆ ಬರುವುದಿಲ್ಲʼʼಎಂದಿದ್ದರು. ಸದ್ಯಕ್ಕೆ ಡಿಸೆಂಬರ್ ನಲ್ಲಿ ʻಡೆವಿಲ್ʼ ತೆರೆಗೆ ಬರಲು ಸಾಧ್ಯ ಇಲ್ಲ. ಹೀಗಾಗಿ ಗಲ್ಲಾಪೆಟ್ಟಿಗೆಯ ಅಖಾಡಕ್ಕೆ ಧ್ರುವ ಒಬ್ಬರೇ ಧುಮುಕಲಿದ್ದಾರೆ.