ಬೆಂಗಳೂರು: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯರೊಬ್ಬರ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ನಡೆಸಲಾಗಿತ್ತು. ಆರ್ಜಿ ಕರ್ ಸರ್ಕಾರಿ ಆಸ್ಪತ್ರೆ (RG Kar Medical Hospital)ಯಲ್ಲಿನ ಟ್ರೈನಿ ವೈದ್ಯೆಯ ಮೇಲೆ ಈ ದೌರ್ಜನ್ಯ ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಧ್ರುವ ಸರ್ಜಾ (Dhruva Sarja) ಕೂಡ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ʻʻಎಲ್ಲರಿಗೂ ನಮಸ್ಕಾರ. ನಾನು ಮಾರ್ಟಿನ್ ಸಿನಿಮಾದ ಪ್ರಚಾರದಲ್ಲಿ ಇದ್ದೇನೆ ಎಂಬುದು ಹೌದು. ಮಾರ್ಟಿನ್ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟುಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ, 2024ರ ಆಗಸ್ಟ್ 14ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಣು ಮಗು ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣುಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲʼʼ.
‘ನಮ್ಮದು ರಾಮಜನ್ಮ ಭೂಮಿ. ಕೆಲವರು ಮಾಡುವ ಕೃತ್ಯದಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು. ಹೆಣ್ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಹೀಗೆಯೇ ಬಟ್ಟೆ ಹಾಕಬೇಕು, ಇದನ್ನೇ ಮಾಡಬೇಕು, ಅದನ್ನೇ ಮಾಡಬೇಕು ಅಂತ ಹೇಳುವುದಕ್ಕಿಂತ ಒಬ್ಬ ಹುಡುಗನನ್ನು ಬೆಳೆಸುವಾಗ ಮೂರು ವಿಷಯ ಕಡ್ಡಾಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಹೇಳಿಕೊಡಬೇಕು. ಹೆಣ್ಮಕ್ಕಳನ್ನು ಹೇಗೆ ರಕ್ಷಿಸಬೇಕು, ಹೇಗೆ ಬೆಂಬಲಿಸಬೇಕು, ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿಕೊಡಲೇಬೇಕು’ ಎಂದಿದ್ದಾರೆ ಧ್ರುವ ಸರ್ಜಾ.
ಇದನ್ನೂ ಓದಿ: Dhruva Sarja : ಗ್ಲೋಬಲ್ ಲೆವೆಲ್‌ನಲ್ಲಿ ʻಮಾರ್ಟಿನ್ʼ ಅಬ್ಬರ; ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟು!
ʻʻಇಂಥ ರೇಪಿಸ್ಟ್ಗಳು ಸಿಕ್ಕಿ, ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ. ಅವರಿಗೆ ಎಂಥ ಶಿಕ್ಷೆ ಕೊಟ್ಟರೂ ಸಮಾಧಾನ ಆಗಲ್ಲ. ಇಂಥ ನನ್ಮಕ್ಕಳನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟುಹಾಕಿದರೂ ಸಮಾಧಾನ ಆಗಲ್ಲ. ಆ ಭಗವಂತ ಇಂಥವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ. ನನಗೂ ಹೆಣ್ಣು ಮಗಳು ಇದ್ದಾಳೆ. ಯಾರಿಗೋ ಅನ್ಯಾಯ ಆಗಿದೆ ಎಂದಾಗ ಅವರ ಜೊತೆ ನಾವು ಇರಬೇಕು. ದಯವಿಟ್ಟು ಧ್ವನಿಯೆತ್ತಿ. ಎಲ್ಲರೂ ನ್ಯಾಯ ಕೇಳೋಣ. ಇದು ಭಾರತವನ್ನು ಬದಲಾಯಿಸುವ ಸಮಯ. ನಾವೆಲ್ಲರೂ ಒಂದಾಗಬೇಕು’ ಎಂದು ಧ್ರುವ ಸರ್ಜಾ ವಿಡಿಯೋ ಹಂಚಿಕೊಂಡಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 31 ವರ್ಷದ ವೈದ್ಯೆಯ ದೇಹದಲ್ಲಿ ಅತೀ ಕ್ರೂರವಾಗಿ ಹಲ್ಲೆ ನಡೆಸಿದ್ದನ್ನು ಸೂಚಿಸುವ ಅನೇಕ ಗಾಯದ ಗುರುತುಗಳಿವೆ ಎನ್ನುವುದನ್ನು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿತ್ತು. ಸಂತ್ರಸ್ತೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಮುಖ ಮತ್ತು ಉಗುರುಗಳ ಮೇಲೆ ಗಾಯಗಳಾಗಿವೆ. ಸಂತ್ರಸ್ತೆಯ ಖಾಸಗಿ ಭಾಗಗಳಿಂದಲೂ ರಕ್ತಸ್ರಾವವಾಗಿದೆ. ಮಾತ್ರವಲ್ಲ ಹೊಟ್ಟೆ, ಎಡಗಾಲಿಗೆ ಗಾಯಗಳಾಗಿವೆ. ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿ ಹೀಗೆ ಎಲ್ಲ ಅಂಗಗಳಲ್ಲಿಯೂ ಗಾಯದ ಗುರುತುಗಳಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.