Site icon Vistara News

Dolly Dhananjay: ಮೈಸೂರಿನಲ್ಲಿ ಡಾಲಿ ಧನಂಜಯ್‌ ಅಭಿನಯದ ‘ಕೋಟಿ’ ಸಿನಿಮಾ ವೀಕ್ಷಿಸಲಿರುವ ಪ್ರತಾಪ್ ಸಿಂಹ!

Dolly Dhananjay Kotee Movie watch by Prathap simha

ಬೆಂಗಳೂರು: ಕಳೆದ ಶುಕ್ರವಾರ (Dolly Dhananjay) ಬಿಡುಗಡೆಯಾದ ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ‘ಫರ್ಪ಼ೆಕ್ಟ್ ಪ್ಯಾಮಿಲಿ ಎಂಟರ್‌ಟೈನರ್’ ಆಗಿ ಹೊರಹೊಮ್ಮಿದ್ದು ದೊಡ್ಡಪರದೆಯಲ್ಲಿ ಪೇಕ್ಷಕರ ಮನ ಗೆಲ್ಲುವುದನ್ನು ಮುಂದುವರಿಸಿದೆ. ಬಹಳ ವರ್ಷಗಳ ನಂತರ ಕನ್ನಡದಲ್ಲಿ ಇಡೀ ಕುಟುಂಬವೇ ಕೂತು ನೋಡುವ ಚಿತ್ರವೊಂದು ಬಂದಿದ್ದು ಪ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಹೆಚ್ಚೆಚ್ಚು ಬರುತ್ತಿದ್ದಾರೆ. ಧನಂಜಯ್ – ರಮೇಶ್ ಇಂದಿರಾ -ತಾರಾ ಅವರ ನಟನೆ, ಕಲರ್ಫುಲ್ ಕ್ಲೈಮ್ಯಾಕ್ಸ್ ‌ಮತ್ತು ದುನಿಯಾ ವಿಜಯ್ ಅವರ ಕ್ಯಾಮಿಯೋಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಕೋಟಿ’ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಿದ್ದು ಮೈಸೂರಿನ ಜನಪ್ರಿಯ ರಾಜಕಾರಣಿ ‘ಪ್ರತಾಪ್ ಸಿಂಹ’ ಅವರು ತಂಡದ ಜತೆ ಸಿನಿಮಾ ವೀಕ್ಷಿಸಲಿದ್ದಾರೆ. ಮೈಸೂರಿನ ವಿಶೇಷ ಪ್ರದರ್ಶನ ಗುರುವಾರ ಸಂಜೆ 6:45ಕೆ ಡಿಆರ್‌ಸಿ ಸಿನಿಮಾದಲ್ಲಿ ನಡೆಯಲಿದೆ.

ಮೈಸೂರಿನಲ್ಲಿ ಅದ್ಭುತ ಪ್ರತಿಕ್ರಿಯೆ

ಕೋಟಿ’ ಚಿತ್ರಕ್ಕೆ ಮೈಸೂರಿನಲ್ಲಿ ಅದ್ಭುತ ರೆಸ್ಪಾನ್ಸ್ ಬರುತ್ತಿದ್ದು ಪ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚುತ್ತಿದ್ದಾರೆ. ಮೈಸೂರಿನಲ್ಲಿ ‘ಕೋಟಿ’ಯ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ಮೈಸೂರು ಸೇರಿದಂತೆ ರಾಜ್ಯಾದ್ಯಂತ ‘ಕೋಟಿ’ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Dolly Dhananjay: ಬಿಡುಗಡೆಗೂ ಮುನ್ನ ‘ಕೋಟಿ’ ಪೇಯ್ಡ್ ಪ್ರೀಮಿಯರ್ ಶೋ: ಜೂನ್‌ 14ಕ್ಕೆ ತೆರೆಗೆ!

ಕೋಟಿ ಮತ್ತು ಮೈಸೂರಿನ ನಂಟು

ಈ ಸಿನಿಮಾದಲ್ಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈ ಕಥಾಹಂದರದ ‘ಕೋಟಿ’ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚು ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ. ಸ್ಟೆರ್ಲಿಂಗ್ ಚಿತ್ರಮಂದಿರ, ವಿವಿ ಮೊಹಲ್ಲಾ, ಮಾರ್ಕೆಟ್, ದೇವೇಗೌಡ ಸರ್ಕಲ್ ಇನ್ನೂ ಹಲವು ಕಡೆ ಚಿತ್ರೀಕರಣ ನಡೆದಿದೆ.

“ನಮ್ಮ ಚಿತ್ರವನ್ನು ಮೈಸೂರಿನಲ್ಲಿ ಶೂಟ್ ಮಾಡಿದ್ದು ತುಂಬಾ ಖುಷಿ ನೀಡಿತ್ತು. ಈಗ ಅದೇ ಮೈಸೂರಿನ ಪ್ರೇಕ್ಷಕರು ಕೋಟಿಯನ್ನು ಮೆಚ್ಚಿಕೊಳ್ಳುತ್ತಿರುವುದು ನೂರುಪಟ್ಟು ಖುಷಿ ನೀಡಿದೆ” ಎಂದು ಕೋಟಿಯ ಬರಹಗಾರ ಮತ್ತು ನಿರ್ದೇಶಕ ಪರಮ್ ಹರ್ಷ ವ್ಯಕ್ತಪಡಿಸಿದರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ರಾಜಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

Exit mobile version